ಉಡುಪಿ :ಲಸಿಕೆ ವಂಚಿತ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳಿಗೆ ತಪ್ಪದೇ ಲಸಿಕೆ ನೀಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

0
413

ಕುಂದಾಪುರ ಮಿರರ್ ಸುದ್ದಿ…
ಉಡುಪಿ : ಇಂದ್ರಧನುಷ್ ಅಭಿಯಾನದಡಿ ನೀಡುತ್ತಿರುವ ಲಸಿಕಾಕರಣಗಳಿಂದ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಲಸಿಕೆ ಪಡೆಯದೇ ಇರುವ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೂರನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮದ ಕುರಿತ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದಾದ್ಯಂತ ಮೂರನೇ ಹಂತಗಳಲ್ಲಿ ಇಂದ್ರಧನುಷ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಮೊದಲನೇ ಹಾಗೂ ಎರಡು ಹಂತದ ಇಂದ್ರಧನುಷ್ ಲಸಿಕಾಯನ್ನು ನೀಡಲಾಗಿದೆ. ಮೂರನೇ ಹಂತವು ಅಕ್ಟೋಬರ್ 9 ರಿಂದ 14 ರ ವರೆಗೆ ನಡೆಯಲಿದೆ ಎಂದರು.

ಮೊದಲನೇ ಹಂತದಲ್ಲಿ 3,212 ಮಕ್ಕಳಿಗೆ ಲಸಿಕೆ ನೀಡಲು ಗುರಿ ಹೊಂದಿದ್ದು, 3,203 ಮಕ್ಕಳಿಗೆ ಲಸಿಕೆ ನೀಡಿ, ಶೇ. 99.72 ರಷ್ಟು, 708 ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲು ಗುರಿ ಹೊಂದಿ 708 ಜನರಿಗೂ ಲಸಿಕೆ ನೀಡಿ ಶೇ. 100 ರಷ್ಟು ಪ್ರಗತಿ ಸಾಧಿಸಲಾಗಿದೆ. ಎರಡನೇ ಹಂತದಲ್ಲಿ 1870 ಮಕ್ಕಳಿಗೆ ಗುರಿ ಹೊಂದಿ 2173 ಮಕ್ಕಳಿಗೆ ಲಸಿಕೆ ನೀಡಿ, ಶೇ. 116 ರಷ್ಟು, 335 ಗರ್ಭಿಣಿ ಹೆಣ್ಣುಮಕ್ಕಳಿಗೆ ಗುರಿ ಹೊಂದಿ 439 ಲಸಿಕೆ ನೀಡಿ, ಶೇ. 131 ರಷ್ಟು ಪ್ರಗತಿ ಸಾಧಿಸಲಾಗಿದೆ. ಮೂರನೇ ಹಂತದಲ್ಲಿ 1447 ಮಕ್ಕಳಿಗೆ ಹಾಗೂ 260 ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಇಂದ್ರಧನುಷ್ ಅಭಿಯಾನದಲ್ಲಿ ಅರ್ಹರಿರುವ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರು ಲಸಿಕೆ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಈ ಲಸಿಕೆ ಹಾಕಿಸಲು ಹಿಂದೇಟು ಹಾಕುವ ಪಾಲಕರಿಗೆ ಮನವೊಲಿಸಿ, ಅವರುಗಳ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ, ಪ್ರತಿಶತಃ ನೂರರಷ್ಟು ಲಸಿಕಾ ಪ್ರಗತಿ ಸಾಧಿಸಬೇಕು ಎಂದರು.

Click Here

ಲಸಿಕೆ ಪಡೆಯದಿರುವ ಬಗ್ಗೆ ಅಂಗನವಾಡಿಗಳು ಹಾಗೂ ಶಾಲೆಗಳಲ್ಲಿ ಮಾಹಿತಿ ಸಂಗ್ರಹಿಸಿ, ಲಸಿಕೆಯಿಂದ ಹೊರಗುಳಿದ ಮಕ್ಕಳಿಗೆ ತಪ್ಪದೇ ಲಸಿಕೆ ನೀಡುವಲ್ಲಿ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಇಂದ್ರಧನುಷ್ ಕಾರ್ಯಕ್ರಮದಲ್ಲಿ ದನುರ್ವಾಯು, ದಡಾರ, ನಾಯಿಕೆಮ್ಮು,ಪೊಲೀಯೋ ಸೇರಿದಂತೆ ಮತ್ತಿತರ ರೋಗಗಳ ವಿರುದ್ಧ ಲಸಿಕಾಕರಣವನ್ನು ಮಾಡಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಇದನ್ನು ಪಡೆಯುವುದರಿಂದ ಭವಿಷ್ಯದಲ್ಲಾಗುವ ಲಾಭದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.

ಇಂದ್ರಧನುಷ್ ಅಭಿಯಾನದ ಮೇಲ್ವಿಚಾರಣೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಮಾಡಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ರಾಮ್‌ರಾವ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಪ್ರಶಾಂತ್ ಗಣಪತಿ ಭಟ್, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಪ್ರೇಮಾನಂದ, ಡಾ. ಅರುಣ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here