ಸಮೃದ್ಧ ಬೈಂದೂರು ಕಟ್ಟಬೇಕೆಂಬ ಪರಿಕಲ್ಪನೆ ಮೂಡಿರುವುದು ನಿಜವಾಗಿಯೂ ಅಧ್ಭುತ ಪರಿಕಲ್ಪನೆ – ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಕನಸಗಳೇ ಇಲ್ಲದೆ ಸಮಾಜ ಕಟ್ಟುವುದು ಕಷ್ಟ. ಅನೇಕ ವರ್ಷಗಳಿಂದ ಸಮೃದ್ಧ, ಶಕ್ತಿಶಾಲಿ, ಸ್ವಾಭಿಮಾನಿ ಭಾರತ ಕಟ್ಟಬೇಕೆಂದು ಕೋಟ್ಯಾಂತರ ಮಂದಿ ಭಾರತೀಯರು ಕನಸು ಕಂಡಿದ್ದರೆ, ಇಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಸಮೃದ್ಧ ಬೈಂದೂರು ಕಟ್ಟಬೇಕೆಂಬ ಪರಿಕಲ್ಪನೆ ಮೂಡಿರುವುದು, ಸಮೃದ್ಧ ಬೈಂದೂರು ಕಟ್ಟಬೇಕೆಂಬ ಕನಸು ಕಂಡಿರುವುದು ನಿಜವಾಗಿಯೂ ಅಧ್ಭುತ ಪರಿಕಲ್ಪನೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತ್ರಾಸಿಯ ಕೊಂಕಣಿ ಖಾರ್ವಿ ಸಭಾಭವನದಲ್ಲಿ ಶನಿವಾರ ನಡೆದ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ (ಡಾ.ಎಚ್.ಎಸ್.ಶೆಟ್ಟಿ) ಅಭಿನಂದನಾ ಸಮಾರಂಭ, ‘300 TREES’ ಉದ್ಘಾಟನಾ ಸಮಾರಂಭ ಹಾಗೂ ಸಮೃದ್ಧ ಬೈಂದೂರು ಪರಿಕಲ್ಪನೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು ಶೇ.40 ರಷ್ಟು ಹುದ್ದೆಗಳು ಖಾಲಿ ಇದೆ. ಶೇ.1ರಷ್ಟು ಸರಕಾರ ಉದ್ಯೋಗ ಸೃಷ್ಟಿಸಿದರೆ ಸುಮಾರು 6.5 ಲಕ್ಷ ಉದ್ಯೋಗ ಸೃಷ್ಟಿಸಬಹುದು. ಹೀಗಾಗಿ ಸ್ವಉದ್ಯೋಗ, ಗುಡಿ ಕೈಗಾರಿಕೆಗಳಂತಹ ಕಸುಬುಗಳನ್ನು ಮಾಡುವ ಕನಸು ಸಮೃದ್ಧ ಬೈಂದೂರಿನಲ್ಲಿದೆ. ರಾಜ್ಯದಲ್ಲಿರುವ ಸುಮಾರು 45 ಸಾವಿರ ಸರಕಾರಿ ಶಾಲೆಗಳ ಪೈಕಿ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 10 ಸಾವಿರ ಸರಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿಗೆ ತಲುಪಲಿದೆ. ಹೀಗಾಗಿ ಸರಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗಾಗಿ ವಿಶಿಷ್ಟ ಯೋಜನೆಯನ್ನು ಸಮೃದ್ಧ ಬೈಂದೂರು ರೂಪಿಸಿರುವುದು ಉತ್ತಮ ಕೆಲಸ. ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 37 ಜನರ ಆರೋಗ್ಯ ಸುಧಾರಣೆಗೆ ಮುಂದಾಗಿರುವುದು ಕ್ರಾಂತಿಕಾರಿ ಕಲ್ಪನೆಯಾಗಿದ್ದು, ಎದುರಾಗಲಿರುವ ಸವಾಲುಗಳನ್ನು, ಸಮಸ್ಯೆಗಳನ್ನು ದಾಟಿ ಸಮೃದ್ಧ ಬೈಂದೂರು ಪರಿಕಲ್ಪನೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೈಂದೂರು ವಿಧಾನಸಭಾ ಕ್ಷೇತ್ರವು ಅಭಿವೃದ್ಧಿಗೆ ಪೂರಕವಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ. ಸ್ಪಷ್ಟವಾದ ಯೋಜನೆಗಳು, ಪೂರಕವಾದ ಸಂಪನ್ಮೂಲಗಳು, ಅಗತ್ಯವಾದ ಅನುಷ್ಠಾನಗಳ ಕೊರತೆಯಿಂದ ನಿರೀಕ್ಷೆಯಷ್ಟು ಅಭಿವೃದ್ಧಿ ಕಂಡಿಲ್ಲ. ಬೈಂದೂರಿನ ಅಭಿವೃದ್ಧಿಯಲ್ಲಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜೊತೆಯಲ್ಲಿ ಪ್ರವಾಸೋದ್ಯಮ, ತಂತ್ರಜ್ಞಾನ, ವಾಣಿಜ್ಯೀಕರಣ, ಮತ್ಸ್ಯೋದ್ಯಮ ಕ್ಷೇತ್ರಗಳ ಬೆಳವಣಿಗೆಗೆ ಇರುವಂತಹ ವಿಪುಲ ಅವಕಾಶಗಳನ್ನು ಬಳಸಿಕೊಂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯತ್ತ ಹೆಜ್ಜೆ ಹಾಕುವ ಕಾರ್ಯಕ್ರಮವೇ ಸಮೃದ್ಧ ಬೈಂದೂರು ಪರಿಕಲ್ಪನೆ ಎಂದರು.
ವಿಸ್ತಾರ ನ್ಯೂಸ್‍ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಶುಭಾಶಂಸನೆಗೈದರು. ಸರಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಯ ‘300 Trees’ ಯೋಜನೆಯನ್ನು ಅನಾವರಣಗೊಳಿಸಿದ ಡಾ.ಎಚ್.ಎಸ್.ಶೆಟ್ಟಿ ಶುಭ ಹಾರೈಸಿದರು.
ಸಮೃದ್ಧ ಬೈಂದೂರು ಲೋಗೋವನ್ನು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಫೇಸ್‍ಬುಕ್ ಪೇಜ್‍ನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆರಾಡಿ ಚಂದ್ರಶೇಖರ ಶೆಟ್ಟಿ, ಇನ್ಸ್ಟಾಗ್ರಾಂನ್ನು ಕಾರವಾರ ಮೆಡಿಕಲ್ ಕಾಲೇಜಿ ಪ್ರೊಫೆಸರ್ ಡಾ.ಅಣ್ಣಪ್ಪ ಶೆಟ್ಟಿ, ಎಕ್ಸ್ (ಟ್ವಿಟ್ಟರ್)ನ್ನು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು, ಯೂ ಟ್ಯೂಬ್‍ನ್ನು ಭಗವದ್ಗೀತೆ ಅಭಿಯಾನದ ಉಡುಪಿ ಜಿಲ್ಲಾ ಸಂಚಾಲಕ ರಾಮಕೃಷ್ಣ ಶೇರಿಗಾರ್ ಅನಾವರಣಗೊಳಿಸಿದರು.
ಇದೇ ಸಂದರ್ಭ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ‘ಡಾಕ್ಟರ್ ಆಫ್ ಸೈನ್ಸ್ ಗೌರವ ಪುರಸ್ಕøತ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಮಾರು 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಮಂಗಳೂರಿನ ಚಾರ್ಟೆಡ್ ಎಕೌಂಟೆಂಟ್ ಶಾಂತಾರಾಮ ಶೆಟ್ಟಿ, ಮುಂಬೈನ ಉದ್ಯಮಿ ಜನಾರ್ದನ ದೇವಾಡಿಗ ಉಪಸ್ಥಿರಿದ್ದರು.
ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಬಿ.ಎಸ್.ಸುರೇಶ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು.