ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣ ದೊರಕಿದರೆ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್.ವೈದ್ಯ ಹೇಳಿದರು.
ಅವರು ಭಾನುವಾರ ಕೋಟೇಶ್ವರದ ಕಮಲಮ್ಮ ಸರ್ವೋತ್ತಮ ಬುದ್ಯ ಕಲ್ಯಾಣ ಮಂಟಪದಲ್ಲಿ ನಡೆದ ಬೀಜಾಡಿ ಮೀನುಗಾರರ ಸಹಕಾರಿ ಸಂಘದಿಂದ ಪ್ರತಿಭಾ ಪುರಸ್ಕಾರ, ಮಹಿಳಾ ಮೀನುಗಾರ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೀನುಗಾರಿಕೆ ಮಾಡುವುದೆಂದರೆ ಅವರು ಬಡವರು ಅಂತಲೇ ಅರ್ಥ. ಅದರಲ್ಲೂ ಮಳೆಗಾಲದಲ್ಲಿ ಮೀನುಗಾರಿಕೆ ನಡೆಸುತ್ತಾರೆಂದರೆ ಅವರು ಕಡುಬಡವರೆಂದೇ ಅರ್ಥ. ಆ ನಿಟಿನಲ್ಲಿ ರಾಜ್ಯ ಸರಕಾರದ ಪರಿಹಾರ ಧನವನ್ನು ಅರ್ಹ ಕುಟುಂಬಕ್ಕೆ ಪ್ರಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತೇನೆ. ಕೇಂದ್ರ ಸರ್ಕಾರದಿಂದಲೂ 5 ಲಕ್ಷ ಪರಿಹಾರ ಧನ ಬಿಡುಗಡೆಯಾಗುತ್ತದೆಯಾದರೂ ಇದುವರೆಗೆ ಅದು ಫಲಾನುಭವಿಗಳಿಗೆ ತಲುಪಿಲ್ಲ. ಇದನ್ನು ಪ್ರಶ್ನಿಸಬೇಕಾದ ಸಂಸದರು ಮೌನವಾಗಿದ್ದಾರೆ ಎಂದರು.
ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಬಿ. ಮಂಜುನಾಥ ಕುಂದರ್ ಚಾತ್ರಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ವಿಶೇಷವಾಗಿ ಈ ಸಂದರ್ಭದಲ್ಲಿ ಸಚಿವರನ್ನು ಹಾಗೂ ಶಾಸಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮಹಿಳಾ ಮೀನುಗಾರ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಕೋಟ ಗೀತಾನಂದ ಟ್ರಸ್ಟ್ ಪ್ರರ್ವತಕ ಆನಂದ ಸಿ.ಕುಂದರ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಉಡುಪಿ ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್ ಆರ್, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಎ.ಆರ್. ಅರುಣ್ ಕುಮಾರ್ ಎಸ್.ವಿ., ಬೀಜಾಡಿ ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಜಿ.ಪೂಜಾರಿ, ಕೋಟೇಶ್ವರ ವ್ಯವಸಾಯ ಸೇ.ಸ.ಸಂ.ನಿ. ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಗೋಪಾಡಿ ಶಾಖೆಯ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಪೈ, ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ತೋಟದಬೆಟ್ಟು ಕೊಮೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ಕಾಂಚನ್ ಪ್ರಾಸ್ತಾವಿಸಿದರು. ಅಣ್ಣಯ್ಯ ಪುತ್ರನ್ ವಂದಿಸಿದರು, ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.