ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಿನ್ನೆಯಷ್ಟೇ ತನ್ನ ಹುಟ್ಟಿಹಬ್ಬವನ್ನು ಆಚರಿಸಿಕೊಂಡಿದ್ದ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಇಂದು ಬೆಳಿಗ್ಗೆ ಶಾಲೆಗೆ ಹೊರಟ ಬಸ್ಸಿಗೆ ಕಾಯುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ಎಂಬಲ್ಲಿ ನಡೆದಿದೆ. ಕುಂದಾಪುರದಲ್ಲಿ ಅಕ್ಷರದಾಸೋಹ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅರುಣ್ ಕುಮಾರ್ ಶೆಟ್ಟಿ ಎಂಬುವರ ಪುತ್ರ, ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ ಎಂಬಾತನೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಬಾಲಕ.
ಪೃಥ್ವಿರಾಜ್ ಶೆಟ್ಟಿ ನಿನ್ನೆಯಷ್ಟೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಇಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೊರಟು ಶಾಲಾ ವಾಹನಕ್ಕಾಗಿ ತಾಯಿಯೊಂದಿಗೆ ಕಾಯುತ್ತಿದ್ದ. ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು, ವಿಷಯವನ್ನು ತಕ್ಷಣ ತಾಯಿಗೆ ತಿಳಿಸಿದ್ದ ಎನ್ನಲಾಗಿದೆ. ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಆಸ್ಪತ್ರೆಗೆ ತಲುಪುವ ವೇಳೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಅಕ್ಟೋಬರ್ 27ರಂದು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಪೃಥ್ವಿರಾಜ್ ಶೆಟ್ಟಿಯ ಅಕ್ಕ ಶಾಲೆಯಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಳು. ಇದೀಗ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅರುಣ್ ಕುಮಾರ ಶೆಟ್ಟಿ ಕುಟುಂಬ ಇದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.