ಕುಂದಾಪುರ ಮಿರರ್ ಸುದ್ದಿ…
ಕೋಟ :ಸೌಹಾರ್ಧ ವ್ಯವಸ್ಥೆಯನ್ನು ಸಹಕಾರಿ ವ್ಯವಸ್ಥೆಯಡಿ ತರಲು ನಿಯಮಗಳಲ್ಲಿ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಒತ್ತಡ ಹೇರಲು ಪ್ರಯತ್ನಿಸಲಾಗುತ್ತಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು,
ಕೋಟ ಸಹಕಾರಿ ವ್ಯವಸಾಯಕ ಸಂಘದ ಗಿಳಿಯಾರು ನೂತನ ಶಾಖಾ ಕಟ್ಟಡ ಸಹಕಾರ ಸೂರ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರದ ವ್ಯವಸ್ಥೆ ಸುಲಲಿತವಾಗಿ ನಡೆಯಲು ನಿಯಮ ಬದಲಾವಣೆ ಅಗತ್ಯವಾಗಿ ಆಗಬೇಕು. ಕರಾವಳಿ ಜಿಲ್ಲೆ ವಾಣಿಜ್ಯ ಬ್ಯಾಂಕ್‍ಗಳ ತವರೂರಾದರೂ, ಇಂದು ರಾಷ್ಟ್ರೀಕೃತ ಬ್ಯಾಂಕ್‍ಗಳ ವಿಲೀನತೆಯಿಂದ ಅನೇಕ ಅಧಿಕಾರಿಗಳು ಬೇರೆ ರಾಜ್ಯದವರಾಗಿರುವುದರಿಂದ ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಕೇಂದ್ರ ಸರ್ಕಾರ ಗ್ರಾಮಕ್ಕೊಂದು ಸಹಕಾರಿ ಸಂಘಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿ ಸಹಕಾರಿ ಸಂಘಗಳ ನಿರ್ನಾಮಕ್ಕೆ ಹುನ್ನಾರ ನಡೆಸುತ್ತಿದೆ. ಆದರೆ ಸಹಕಾರಿ ಸಂಘಗಳು ಗ್ರಾಮದ ಜನತೆಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇಂತಹ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಾರದಂತೆ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಹೇರಲಾಗಿದೆ. ಬಲಿಷ್ಟ ಸಹಕಾರಿ ಸಂಘವನ್ನು ಉಳಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಸಹಕಾರಿ ಸಂಘಗಳ ಧ್ಯೇಯೋದ್ಧೇಶವನ್ನು ಅರಿತು ಕಾನೂನು ಬದಲಾವಣೆ ತರಬೇಕು ಎಂದರು.
ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಗಿಳಿಯಾರು ಶಾಖೆಯ ನೂತನ ಕಟ್ಟಡವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ.ಎಂ.ರಾಜೇಂದ್ರ ಕುಮಾರ್, ಗೋದಾಮು ಕಟ್ಟಡವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ, ಭದ್ರತಾ ತಿಜೋರಿಯನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ ಕುಮಾರ್ ಎಸ್ ವಸತಿ ಸಂಕೀರ್ಣ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಗಣಕ ಯಂತ್ರ ಉದ್ಘಾಟಿಸಿದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ನಿರ್ದೇಶಕ ಡಾ.ಐ.ದೇವಿಪ್ರಸಾದ್ ಶೆಟ್ಟಿ ಫಲಾನುಭವಿಗಳಿಗೆ ಚೆಕ್ ಮತ್ತು ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ ಕುಂದರ್ ಸುತ್ತುನಿಧಿ ಹಸ್ತಾಂತರಿಸಿದರು.
ಸಂಘದ ವತಿಯಿಂದ ಡಾ.ರಾಜೇಂದ್ರ ಕುಮಾರ್, ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಸಂಸ್ಥೆಯಲ್ಲಿ ಆಡಳಿತ ನಡೆಸಿ ನಿವೃತ್ತರಾದ ಶ್ರೀಧರ ಸೋಮಯಾಜಿ, ಸುರೇಂದ್ರ ಹೆಗ್ಡೆ, ಭರತ್ ಕುಮಾರ್ ಶೆಟ್ಟಿ, ಡಾ.ಪ್ರಶಾಂತ ಕುಮಾರ್ ಶೆಟ್ಟಿ, ಅಶೋಕ್ ಕುಮಾರ ಶೆಟ್ಟಿ ಮತ್ತು ಇಂಜಿನಿಯರ್ ಪ್ರಮೋದ್ ಶೆಟ್ಟಿ, ಚೇತನ್, ದಾನಿ ಸುಮಿತ್ರ ಹೇರ್ಳೆ ಅವರನ್ನು ಗೌರವಿಸಲಾಯಿತು. ಮೂಡುಗಿಳಿಯಾರಿನ ಸಮಸ್ತ ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಅಶೋಕ ಕುಮಾರ್ ಶೆಟ್ಟಿ, ಮಹೇಶ ಹೆಗ್ಡೆ ಮೊಳಹಳ್ಳಿ, ಕುಂದಾಪುರ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‍ನ ಅಧ್ಯಕ್ಷ ಎಂ.ಶಿವರಾಮ ಶೆಟ್ಟಿ, ಬೊಬ್ಬರ್ಯೇಶ್ವರ ದೈವಸ್ಥಾನದ ಮೊಕ್ತೇಸರ ಮಹಾಬಲ ಹೇರ್ಳೆ ಮತ್ತು ಸಂಘದ ನಿರ್ದೇಶಕರು ಇದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವರದಿ ವಾಚಿಸಿದರು. ಶಾಖಾ ಸಭಾಪತಿ ಟಿ.ಮಂಜುನಾಥ ಗಿಳಿಯಾರು ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಉಮೇಶ ವಂದಿಸಿದರು. ಅಧ್ಯಾಪಕ ಸತೀಶ್ಚಂದ್ರ ಶೆಟ್ಟಿ ಮತ್ತು ಸಿಬ್ಬಂದಿ ಶಾಲಿನಿ ಹಂದೆ ನಿರೂಪಿಸಿದರು.