ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇವಸ್ಥಾನದ ನೀಲನಕ್ಷೆ ಬಿಡುಗಡೆ ಹಾಗೂ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಅ.24ರಂದು ನಡೆಯಿತು.
ಉದ್ಯಮಿ ದತ್ತಾನಂದ ಅವರು ನೂತನ ದೇವಳದ ನೀಲನಕ್ಷೆ ಬಿಡುಗಡೆಗೊಳಿಸಿ ಮಾತನಾಡಿ, ಧಾರ್ಮಿಕ ಸ್ಥಳಗಳಲ್ಲಿನ ಆರಾಧನೆ ಭಗವಂತನಿಗೆ ಸಮರ್ಪಿತವಾಗುತ್ತದೆ. ಪ್ರಾಚಿನವಾದ ದೇವಸ್ಥಾನಗಳನ್ನು ಅಭಿವೃದ್ದಿ ಪಡಿಸಿ, ಧಾರ್ಮಿಕ ವಿಧಿವತ್ತಾಗಿ ವಿಧಿವಿಧಾನಗಳು ನಡೆದಾಗ ಊರಿಗೆ ಸುಭೀಕ್ಷೆಯಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ದಾರ ಪ್ರಸ್ತುತವಾಗಿದೆ ಎಂದರು.
ಶಿಲ್ಪಿಗಳಿಗೆ ಕಾಮಗಾರಿ ಆರಂಭಿಸಲು ವೀಳ್ಯ ನೀಡಿದ ಕುಂದಾಪುರದ ಶ್ರೀ ಮೈಲಾರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ರಮೇಶ ಬಿಲ್ಲವ ಮೈಲಾರೇಶ್ವರ ದೇವಸ್ಥಾನಕ್ಕೂ ಈ ನಂದಿಕೇಶ್ವರ ದೇವಸ್ಥಾನಕ್ಕೂ ಸಂಬಂಧವಿರುವುದು ಹಿಂದೆ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ವ್ಯಕ್ತವಾಗಿತ್ತು. ಈಗ ಇಲ್ಲಿ ಸ್ವರ್ಣರೂಢ ಪ್ರಶ್ನೆ ಇರಿಸಿದಾಗಲೂ ಕೂಡಾ ಇದು ದೃಢಪಟ್ಟಿದೆ. ನಿರೀಕ್ಷಿತ ಸಮಯದಲ್ಲಿ ದೇವಸ್ಥಾನ ನಿರ್ಮಾಣವಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ|ನಾಗೇಶ್ ಮಾತನಾಡಿ, ನಂದಿಕೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಶತಮಾನಗಳ ಇತಿಹಾಸವಿದೆ. ಕೋಪ ಹಾಗೂ ಸಂತೋಷವನ್ನು ಸ್ವಪ್ನದ ಮೂಲಕ ಸಂದೇಶ ನೀಡುವ ದೇವರು ಖ್ಯಾತಿ ಈ ನಂದಿಕೇಶ್ವರ ದೇವರಿಗಿದೆ. ಈ ದೇವಸ್ಥಾನವನ್ನು ಶಿಲಾಮಯವಾಗಿ ಜೀರ್ಣೋದ್ಧಾರಗೊಳಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಜೀರ್ಣೋದ್ದಾರ ಸಮಿತಿ ರಚನೆ ಮಾಡಿಕೊಂಡು ಕಾರ್ಯೋನ್ಮುಖವಾದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 50 ಲಕ್ಷ ವೆಚ್ಚದಲ್ಲಿ ಈ ದೇವಸ್ಥಾನ ನಿರ್ಮಾಣ ನಿಗಧಿತ ದಿನಗಳ ಒಳಗೆ ನಿರ್ಮಾಣವಾಗಲಿದೆ ಎಂದರು.
ಕುಂದಾಪುರ ಬಟ್ರಹಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸ್ಥಾಪಕ ಅಧ್ಯಕ್ಷರಾದ ರಾಮಕೃಷ್ಣ ಬಿಜೂರು, ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ರಾಬರ್ಟ್ ರೆಬೆಲ್ಲೋ, ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಯು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಈ ದೇವಸ್ಥಾನ 400 ವರ್ಷಗಳಿಗಿಂತಲೂ ಹಿಂದೆ 15ನೇ ಶತಮಾನದಲ್ಲಿ ಬಿದನೂರು ಅರಸರ ಆಳ್ವಿಕೆಯಲ್ಲಿ ಸ್ಥಾಪನೆಗೊಂಡ ಇತಿಹಾಸವಿದೆ. ಬ್ರಿಟಿಷರ ಆಡಳಿತದಲ್ಲಿ ದೇವಸ್ಥಾನಕ್ಕೆ 4 ಸೆಂಟ್ಸ್ ಜಾಗ ಮಂಜೂರಾತಿಯಾಗಿದೆ. 40 ವರ್ಷಗಳ ಹಿಂದೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಭಕ್ತರು ಸೇರಿ ದೇವರಿಗೆ ಸುಂದರವಾದ ಗುಡಿ ನಿರ್ಮಿಸಿದರು. ಆಸ್ಪತ್ರೆಯು ಅಭಿವೃದ್ದಿಗೊಂಡಂತೆ ಹೊಸ ಕಟ್ಟಡಗಳ ನಿರ್ಮಾಣವಾದಾಗ ಅದರ ಅಡಿಪಾಯ ದೇವಸ್ಥಾನದ ಅಡಿಪಾಯಕ್ಕಿಂತ ಎತ್ತರದಲ್ಲಿರುವುದು ವಾಸ್ತುಶಾಸ್ತ್ರದ ಪ್ರಕಾರ ಶ್ರೇಷ್ಠವಲ್ಲ ಎಂದು ಕಂಡುಬಂದ ಹಿನ್ನೆಲೆ ಮಾತ್ರವಲ್ಲದೆ ಶಿಥಿಲಗೊಂಡಿರುವ ದೇವಸ್ಥಾನದ ಪುನರ್ ನವೀಕರಣದ ಅನಿರ್ವಾತೆಯೂ ಇರುವುದರಿಂದ ಈಗಾಗಲೇ ಎ.10-2022ರಂದು ಸ್ವರ್ಣರೂಢ ಪ್ರಶ್ನೆಯನ್ನು ಇರಿಸಲಾಗಿತ್ತು. ಸುಮಾರು 50 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ತಯಾರಿಸಲಾಗಿದೆ. ಡಿಸೆಂಬರ್‍ನಲ್ಲಿ ಕಲಾಸಂಕೋಚಗೊಳಿಸಿ 90 ದಿನಗಳ ಅವಧಿಯಲ್ಲಿ ದೇವಳ ನಿರ್ಮಿಸಿ ಪುನರ್ ಪ್ರತಿಷ್ಠಾಪನೆ ನಡೆಸಲಾಗುವುದು ಎಂದರು.
ಶಲಿತಾ ರಾವ್ ಹಾಗೂ ರೂಪಾ ಪ್ರಾರ್ಥನೆ ಮಾಡಿದರು. ಪುರಸಭಾ ಮಾಜಿ ಸದಸ್ಯ ರಾಜೇಶ ಕಾವೇರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.