ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೈಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಳೆದ 40 ವರ್ಷಗಳ ಇತಿಹಾಸ ಹೊಂದಿದೆ ಪ್ರಸ್ತುತ 400 ವಿದ್ಯಾರ್ಥಿಗಳಿದ್ದಾರೆ. ಆದರೆ ಇದುವರೆಗೆ ಈ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯ ಇರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಜರಾತಿ ಸಮಸ್ಯೆ ಉಂಟಾಗುತ್ತಿತ್ತು. ಪ್ರತಿ ದಿನವೂ ಇಲ್ಲಿನ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ, ಕಾಲೇಜಿನ ಬೋಧಕ ಮಂಡಳಿ ಹಾಗೂ ವಿದ್ಯಾರ್ಥಿಗಳು ಇತ್ತೀಚೆಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಗಮನಕ್ಕೆ ಬಸ್ ಸೌಲಭ್ಯ ಇಲ್ಲದೇ ಉಂಟಾಗುತ್ತಿದ್ದ ಸಮಸ್ಯೆಯನ್ನು ಗಮನಕ್ಕೆ ತರುವ ಮೂಲಕ ಮನವಿ ಮಾಡಿದ್ದರು. ಮನವಿ ಆಲಿಸಿದ ಶಾಸಕ ಗಂಟಿಹೊಳೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಎಲ್ಲಾ ಜನಪ್ರತಿನಿಧಿಗಳಂತೆ ಇವರು ಕೇವಲ ಭರವಸೆ ನೀಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಮನವಿ ಆಲಿಸಿದ ಶಾಸಕ ಗಂಟಿಹೊಳೆ ಕಾಲೇಜಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗಾಗುತ್ತಿದ್ದ ಸಮಸ್ಯೆಗಳನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರ ಗಮನಕ್ಕೆ ತಂದಿದ್ದಾರೆ. ಜೊತೆಗೆ ಸಾರಿಗೆ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ಪರಿಣಾಮವಾಗಿ ಮನವಿ ಸ್ವೀಕರಿಸಿ ಒಂದು ತಿಂಗಳೊಳಗಾಗಿ ಅಂದರೆ ಅಕಟ್ಓಬರ್ 30ರಂದು ಬೆಳಿಗ್ಗೆಯಿಂದ ಬೈಂದೂರು ಸರ್ಕಾರಿ ಪದವಿ ಕಾಲೇಜಿಗೆ ಬಸ್ ಸಂಚಾರ ಆರಂಭವಾಗಿದೆ.
ಮಳೆಗಾಲದಲ್ಲಂತೂ ಬಸ್ಸಿನ ಸೌಕರ್ಯವಿಲ್ಲದೇ ಬಹಳ ಕಷ್ಟ ಅನುಭವಿಸಿದ್ದೇವೆ. ಬಸ್ ಸೌಲಭ್ಯದಿಂದ ಬಹಳಷ್ಟು ಸಂತೋಷವಾಗಿದೆ ಎಂದು ದ್ವಿತೀಯ ಬಿಎ ವಿದ್ಯಾರ್ಥಿನಿ ಅಕ್ಷಾತಾ ಹೇಳಿದ್ದಾರೆ
40 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಸ್ ಸೌಕರ್ಯ ೊದಗಿಸಿದ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಸಾರಿಗೆ ಇಲಾಖೆಗೆ ಕೃಜ್ಞತೆ ಸಲ್ಲಿಸಿದ್ದಾರೆ ತೃತೀಯ ಬಿಎ ವಿದ್ಯಾರ್ಥಿ ರೋಹನ್.
ಬಸ್ ಸೌಲಭ್ಯದಿಂದ ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಗಮನಹರಿಸಲು ಸಾಧ್ಯವಾಗಿದೆ ಎಂದು ದ್ವಿತೀಯ ಬಿಎ ವಿದ್ಯಾರ್ಥಿನಿ ಸುಹರ್ಷಿಣಿ ಹೇಳಿದ್ದಾರೆ.
ಗ್ರಾಮೀಣ ಭಾಗದ ಪದವಿ ಕಾಲೇಜಿಗೆ ಸಂಪರ್ಕ ಸಮಸ್ಯೆಯಿಂದ ದಾಖಲಾತಿ ಪ್ರಮಾಣ ಕಡಿಮೆಯಾಗಿತ್ತು. ಬಸ್ ಸೌಲಭ್ಯದಿಂದಾಗಿ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ ಎಂದು ತೃತೀಯ ಬಿಬಿಎ ವಿದ್ಯಾರ್ಥಿ ಅಮೇಂದ್ರ ಹೇಳಿದ್ದಾರೆ. ಉಪನ್ಯಾಸಕ ಮೋಹನ್ ಕುಮಾರ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಪನ್ಯಾಸಕರ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.