ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅರಬ್ಬಿ ಸಮುದ್ರದ 16 ನಾಟಿಕಲ್ ಮೈಲ್ ದೂರದಲ್ಲಿ ಬಿದ್ದ ಮೀನುಗಾರನೊಬ್ಬನನ್ನು ಮತ್ತೊಂದು ಮೀನುಗಾರಿಕಾ ಬೋಟಿನ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ಮುಂಜಾನೆ ಸುಮಾರು 7.30ಕ್ಕೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಕೋಡಿ ಎಲ್.ಪಿ ಯ ನೇರ ಸುಮಾರು 16 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವಿ. ಕೆ. ಅಬ್ಬುಲ್ಲಾ ರವರ ಮಾಲೀಕತ್ವದ INTD-KA-03-MM-3008 “ಸಾಗರ್” ಹೆಸರಿನ ಜೋಟಿನಲ್ಲಿದ್ದ ಮೀನುಗಾರರಿಗೆ ಸಮುದ್ರದಲ್ಲಿ ಬಿದ್ದು ಈಜಾಡುತ್ತಿರುವ ವ್ಯಕ್ತಿಯೊಬ್ಬ ಕಾಣಿಸಿದ್ದಾನೆ. ತಕ್ಷಣ ಆ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಬಳಿಕ ವಿಚಾರಿಸಿದಾಗ “ಮುಂಜಾನೆಯ ಸಮಯ ತಾನು ಇತರ ಮೀನುಗಾರರೊಂದಿಗೆ ಮೀನುಗಾರಿಕೆ ಮಾಡುತ್ತಿರುವಾಗ ರಭಸವಾದ ಗಾಳಿ ಮಳೆಗೆ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯಿಂದ ಆಕಸ್ಮಿಕವಾಗಿ ಬಿದ್ದಿರುವುದಾಗಿ” ತಿಳಿಸಿದ್ದಾನೆ. “ನಂತರ ಗಾಳಿ ಮಳೆಗೆ ದೋಣಿಯಿಂದ ದೂರ ಸಾಗಿದ್ದು ದೋಣಿಯ ಸಂಪರ್ಕಕ್ಕೆ ಸಿಕ್ಕದೇ ಈಜಾಡುತ್ತಿದ್ದೆ” ಎಂದು ಹೇಳಿದ್ದಾನೆ ಎಂದು ಸಾಗರ್ ಬೋಟಿನಲ್ಲಿದ್ದ ಮೀನುಗಾರರು ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯುವಕನ ರಕ್ಷಣೆಯ ಬಳಿಕ ಯುವಕ ಬಿದ್ದ ದೋಣಿಯವರು ಹುಡುಕಿಕೊಂಡು ವಾಪಾಸು ಬಂದಿದ್ದು, ಅವರ ದೋಣಿ ಹತ್ತಿಸಿ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ. ಇದೀಗ 16 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಯುವಕನ ರಕ್ಷಣೆ ಮಾಡಿದ ಸಾಗರ್ ಬೋಟಿನ ಮೀನುಗಾರರ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.