ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಳೆದ ವರ್ಷವಷ್ಟೇ ಹೊಸ ಆಡಳಿತದೊಂದಿಗೆ ಪುನಾರಂಭಗೊಂಡ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿಗೆ ಆರಂಭದ ದಿನಗಳಲ್ಲಿ ಹಲವು ತೊಡಕುಗಳು ಎದುರಾಗಿತ್ತು. ಆದರೆ ಈ ಎಲ್ಲಾ ತೊಡಕುಗಳನ್ನು ಮೆಟ್ಟಿ ನಿಂತು ಇಂದು ಜನತಾ ಸಾಧನೆಯ ಶಿಖರವೇರಿದೆ ಎಂದು ವಿ.ವಿ.ವಿ ಮಂಡಳಿ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ವಿ.ವಿ.ವಿ ಮಂಡಳಿ ಹಾಗೂ ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ಆಡಳಿತದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಜನತಾ ಸಂಭ್ರಮ- 2ಕೆ23 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಲೇಜಿನ ಉಪನ್ಯಾಸಕರ ಹೋರಾಟಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಅವರೆಲ್ಲರ ಅವಿರತ ಶ್ರಮ ಶ್ಲಾಘನೀಯ. ಶೈಕ್ಷಣಿಕ ಕ್ಷೇತ್ರದ ಆಸ್ತಿ ಚಿತ್ರಾ ಕಾರಂತ್ ಅವರ ಮಾರ್ಗದರ್ಶನದಲ್ಲಿ, ಗಣೇಶ್ ಮೊಗವೀರ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಆರಂಭಗೊಂಡ ಎರಡೇ ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವುದು ಸಂತಸದ ವಿಚಾರ ಎಂದರು.
ಜನತಾ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಶುಭಕರ ಆಚಾರ್, ಸಾಕಷ್ಟು ಸವಾಲುಗಳನ್ನು ಎದುರಿಸಿ ಎಲ್ಲರನ್ನು ನಿಬ್ಬೆರಗುಗೊಳಿಸುವಂತೆ ಕಾಲೇಜು ಉನ್ನತ ಮಟ್ಟಕ್ಕೆ ಏರಿದೆ. ಸತತ ಪ್ರಯತ್ನಗಳಿದ್ದರೆ ಖಂಡಿತ ಗೆಲುವು ಸಾಧ್ಯ. ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ. ಜಗತ್ತು ವಿಶಾಲವಾಗಿದೆ. ಬೇಕಾದಂತೆ ಈಜಿ ದಡ ಸೇರಬಹುದು. ಇಡೀ ಜಗತ್ತನ್ನು ಬದಲಾಯಿಸುವ ತಾಕತ್ತು ಇದ್ದರೆ ಅದು ಶಿಕ್ಷಣಕ್ಕೆ ಮಾತ್ರ. ಆ ಶಿಕ್ಷಣವನ್ನು ನೀವೆಲ್ಲರೂ ಆಸಕ್ತಿಯಿಂದ ಪಡೆಯಿರಿ ಎಂದರು.
ಮುಖ್ಯತಿಥಿಗಳಾಗಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕಿ ಚಿತ್ರಾ ಕಾರಂತ್, ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಡ್ರಾಮಾ ಜ್ಯೂನಿಯರ್ ಪ್ರತಿಭೆ ಸಮೃದ್ದಿ ಎಸ್ ಮೊಗವೀರ, ಕಾಲೇಜು ವಿದ್ಯಾರ್ಥಿ ನಾಯಕ ಗಣೇಶ್ ಇದ್ದರು.
ಶೈಕ್ಷಣಿಕ ವಿಭಾಗ ಕ್ರೀಡಾ ವಿಭಾಗ, ಸಾಂಸ್ಕೃತಿಕ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಪ್ರಸಕ್ತ ಸಾಲಿನ ಕ್ರೀಡಾ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ 27 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಹಾಗೂ ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಮೊಗವೀರ ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾಂಕ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು.