ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಭಾರತೀಯ ಸೇನೆಗೆ ಆಯ್ಕೆಗೊಂಡು ತರಬೇತಿ ಮುಗಿಸಿ ತವರೂರಿಗೆ ಆಗಮಿಸಿದ ಹೆಮ್ಮಾಡಿಯ ಸುನೀತಾ ಪೂಜಾರಿಗೆ ಕುಂದಾಪುರದಲ್ಲಿ ಅದ್ಧೂರಿ ಸ್ವಾಗತ ಹಾಗೂ ಸನ್ಮಾನ ನಡೆಯಿತು.
ಬಳಿಕ ಕುಂದಾಪುರದ ಲಾಲ್ ಬಹದ್ಧೂರ್ ಶಾಸ್ತ್ರೀ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಇದೇ ಸಂದರ್ಭ ವಿವಿಧ ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ಸುನೀತಾ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಅಲ್ಲದೇ ಸುನೀತಾ ಜೊತೆಗೆ ಆಗಮಿಸಿದ್ದ ಕಲ್ಕತ್ತಾ ಮೂಲದ ಆಯಂತಿಕಾರನ್ನೂ ಸನ್ಮಾನಿಸಲಾಯಿತು. ಕುಂದಾಪುರ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಸುನೀತಾ ಪೂಜಾರಿ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ.ಕೇವಲ ಅದೃಷ್ಟವನ್ನೇ ನಂಬಿ ಕುಳಿತರೆ ಪ್ರಯೋಜನವಿಲ್ಲ. ನನ್ನ ಇಡೀ ಊರು ನನಗೆ ಮನೆಯಿದ್ದಂತೆ. ಎಲ್ಲರ ಸಹಕಾರದಿಂದ ಸೇನೆಯಲ್ಲಿ ಅವಕಾಶ ದೊರಕಿದೆ. ದೇಶಸೇವೆ ಮಾಡುವ ಬಯಕೆ ಹೆಚ್ಚುತ್ತಿದೆ ಎಂದರು.
ಕುಂದಾಪುರದಿಂದ ತಲ್ಲೂರು ಮೂಲ್ಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಮ್ಮಾಡಿವರೆಗೆ ತೆರೆದ ವಾಹನದಲ್ಲಿ ಭರ್ಜರಿ ಮೆರವಣಿಗೆಯೊಂದಿಗೆ ಕರೆತರಲಾಯಿತು. ಬಳಿಕ ಗ್ರಾಮ ದೇವತೆ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹೆಮ್ಮಾಡಿಯ ಶ್ರೀ ಲಕ್ಷ್ಮಿ ನಾರಾಯಣ ರಿಕ್ಷಾ ನಿಲ್ದಾಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ವತಿಯಿಂದ ಗೌರವಿಸಲಾಯಿತು.
ಗೃಹ ರಕ್ಷಕ ದಳದ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ಕೆ.ಸಿ. ರಾಜೇಶ್ ಮಾತನಾಡಿ, ಇಂದು ನಿಶ್ಚಿಂತೆಯಿಂದ ಮನೆಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಆಚರಿಸುತ್ತಿರುವುದಕ್ಕೆ ದೇಶದ ಗಡಿಯಲ್ಲಿ ಹಗಲಿರುಳು ಕಾಯುವ ಯೋಧರು ಕಾರಣ. ಸುನೀತಾ ಪೂಜಾರಿಯವರು ಊರಿನ ಇನ್ನಷ್ಟು ಮಕ್ಕಳಿಗೆ, ಯುವಕರಿಗೆ ಸೇನೆ ಸೇರಲು ಪ್ರೇರಕ ಶಕ್ತಿಯಾಗಲಿ ಎಂದರು.
ಸುನೀತಾಳನ್ನು ಧೈರ್ಯದಿಂದ ದೇಶ ಸೇವೆಗೆ ಕಳುಹಿಸಿದ ತಂದೆ – ತಾಯಿ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ ಎಂದು ಹೆಮ್ಮಾಡಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ ಹೇಳಿದರು.
ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ ಭಟ್ ಅಧ್ಯಕ್ಷತೆ ವಹಿಸಿದ್ದರು. ಹೊಸಾಡು ಶಾಲಾ ಶಿಕ್ಷಕಿ ಪ್ರತಿಮಾ ಆರ್. ಮೊಗವೀರ, ಜೆಸಿಐ ಕುಂದಾಪುರ ಸಿಟಿ ನಿಯೋಜಿತ ಅ‘ಕ್ಷ ರಾಘವೇಂದ್ರ ಕುಲಾಲ್, ಗ್ರಾ.ಪಂ. ಸದಸ್ಯ ರಾಘವೇಂದ್ರ ಪೂಜಾರಿ ಹೆದ್ದಾರಿಮನೆ, ಮಾಜಿ ಸದಸ್ಯ ಸಯ್ಯದ್ ಯಾಸೀನ್ ಸಂತೋಷನಗರ, ಉದ್ಯಮಿ ಅಬ್ಬಾಸ್, ಹೆಮ್ಮಾಡಿಯ ಶ್ರೀ ಲಕ್ಷ್ಮಿ ನಾರಾಯಣ ರಿಕ್ಷಾ ಚಾಲಕ- ಮಾಲಕರ ಸಂಘದ ಅ‘ಕ್ಷ ಪ್ರವೀಣ್ ದೇವಾಡಿಗ, ರವಿ ಕೆ., ಹೆಮ್ಮಾಡಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ, ಸುನೀತಾ ತಾಯಿ ಗಂಗಾ, ಸಹೋದರ ಸುನೀಲ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ನಿವೃತ್ತ ಯೋಧರಾದ ನಾರಾಯಣ ಪೂಜಾರಿ, ಬಾಬು ಪೂಜಾರಿ ಶಿರೂರು, ಸುನೀತಾ ಸಹೋದ್ಯೊಗಿ ಕಲ್ಕತ್ತಾದ ಆಯಂತಿಕಾ ಅವರನ್ನು ಗೌರವಿಸಲಾಯಿತು. ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಸ್ವಾಗತಿಸಿ, ವಸಂತ ಹೆಮ್ಮಾಡಿ ಕಾರ್‍ಯಕ್ರಮ ನಿರೂಪಿಸಿದರು.