ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಲ್ಲೂರು ಸಂತ ಫ್ರಾನ್ಸಿಸ್ ಆಸೀಸಿ ಚರ್ಚ್ ವಠಾರದಲ್ಲಿ, ಚರ್ಚ್ ವತಿಯಿಂದ ಕ್ರೈಸ್ತರು ದೀಪಾವಳಿ ಆಚರಣೆಯನ್ನು ನ.12 ರಂದು ಭಾನುವಾರ ಸಂಜೆಯ ವೇಳೆ ಆಚರಿಸಿದರು.
ಈ ದೀಪಾವಳಿಯ ಕಾರ್ಯಕ್ರಮಕ್ಕೆ, ತಲ್ಲೂರು ಗ್ರಾ.ಪಂಚಾಯಿತಿಯ ಅಧ್ಯಕ್ಷರಾದ ಗಿರೀಶ್ ನಾಯ್ಕ್, ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಹೆಮ್ಮಾಡಿ ಗ್ರಾಮ ಪಂಚಾತಿಯಿಯ ಅಧ್ಯಕ್ಷೆ ನೇತ್ರಾವತಿ, ಕಟ್‍ಬೆಲ್ತೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತಲ್ಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗಿರೀಶ್ ನಾಯ್ಕ್ ಮಾತನಾಡಿ, ನಮ್ಮಲ್ಲಿ ಕ್ರೈಸ್ತ ಹಿಂದುಗಳ ಸಂಬಂಧ ಉತ್ತಮವಾಗಿದೆ. ನಾವು ಅನ್ಯೋನತೆಯಿಂದ ಇದ್ದೇವೆ. ಕ್ರೈಸ್ತ ಬಾಂಧವರು ದೀಪಾವಳಿಯನ್ನು ನಮ್ಮ ಜೊತೆ ಆಚರಿಸುವುದಕ್ಕೆ ಬಹಳ ಸಂತೋಷವಾಗುತ್ತದೆ, ಇಲ್ಲಿ ತೆರಾಲಿ ನಡೆಯುತ್ತಿರುವಾಗ ಕ್ರೈಸ್ತರ ಸಂಖ್ಯೆಗಿಂತ ಹಿಂದುಗಳ ಬಾಂಧವರೆ ಭಾಗವಹಿಸುವುದು ಹೆಚ್ಚು. ಇದು ನಮ್ಮಲ್ಲಿನ ಸಾಮರಸ್ಯಕ್ಕೆ ಒಳ್ಳೆಯ ಉದಾಹರಣೆಯಾಗಿದೆ ಎಂದರು.
ಸಂತ ಫ್ರಾನ್ಸಿಸ್ ಆಸೀಸಿ ಚರ್ಚಿನ ಧರ್ಮಗುರು ವಂ| ಎಡ್ವಿನ್ ಡಿ’ಸೋಜಾ “ ದೀಪಾವಳಿ ಎಲ್ಲರ ಹಬ್ಬ. ಇದು ಬೆಳಕಿನ ಹಬ್ಬ, ಅಂದರೆ ಕತ್ತಲೆಯಿಂದ ಬೆಳಕಿಗೆ ಬರುವುದು, ಪ್ರಾಣಿ ಪಕ್ಷಿ ಮರ ಗೀಡ ಎಲ್ಲವೂ ಸ್ಪಷ್ಟವಾಗಿ ಗೋಚರಿಸಿದರೆ ಕತ್ತಲೆ ಸರಿದು ಬೆಳಕಾಯಿತು ಎಂದು ಅಭಿಪ್ರಾಯ. ಆದರೆ, ಮನುಷ್ಯನ ಹೃದಯದಲ್ಲಿ ಬೆಳಕು ಏರ್ಪಟ್ಟಲ್ಲಿ ಅದೇ ನಿಜವಾದ ಬೆಳಕು, ನಾವು ಪ್ರತಿಯೊಬ್ಬರು ಹೃದಯದಲ್ಲಿರುವ ಕತ್ತಲೆಯನ್ನು ದೂರ ಮಾಡಿ, ನಾವೆಲ್ಲರೂ ಪ್ರೀತಿ ಬಾಂಧವ್ಯದಿಂದ ಸಹೋದರಂತೆ ಬಾಳುವ” ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಅತಿಥಿಗಳು, ಪಂಚಾಯತ್ ಸದಸ್ಯರು, ಅಹ್ವಾನಿತರು, ಚರ್ಚಿನ ಹಣಕಾಸಿನ ಸಮಿತಿ ಸದಸ್ಯರು, ಪಾಲನ ಮಂಡಳಿಯ ಸದಸ್ಯರು ಲೋಹದಾಕ್ರತಿಯ ವೃಕ್ಷದ ಎಲೆಗಳ ಮೇಲೆ ಹಲವಾರು ದೀಪಗಳನ್ನು ಬೆಳಗಿಸಿದರು. ಪಾಲನಮಂಡಳಿ ಕಾರ್ಯದರ್ಶಿ ರೀನಾ ಮೆಂಡೋನ್ಸಾ, 20 ಆಯೋಗಳ ಸಂಯೋಜಕ ರೋನಿ ಲೂಯಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷ ಕೆಲ್ವಿನ್ ಮೆಂಡೋನ್ಸಾ ಸ್ವಾಗತಿಸಿದರು. ಪ್ರೆಸಿಲ್ಲಾ ಮಿನೇಜೆಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.