ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ತರಬೇತುಗೊಳಿಸಿದರೆ ಮುಂದೆ ಅವರ ಸಾಧನೆಗೆ ದಾರಿ ದೀಪವಾಗುತ್ತದೆ. ಹೆಮ್ಮಾಡಿಯಂತಹ ಗ್ರಾಮೀಣ ಭಾಗದ ಮೈದಾನಗಳಲ್ಲಿ ತರಬೇತಿ ನಡೆಸಿ ಇಂದು ಅದೆಷ್ಟೋ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವುದು ಗಮನಾರ್ಹ ಸಂಗತಿ ಎಂದು ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಹೇಳಿದರು.
ಭಾನುವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿಯ ಮೈದಾನದಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಯ ಹಳೆ ವಿದ್ಯಾರ್ಥಿ ರೈಸನ್ ಬೆನೆಟ್ ರೆಬೆಲ್ಲೋ ವಾಲಿಬಾಲ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಭಾರತದ ಉದಯೋನ್ಮುಖ ವಾಲಿಬಾಲ್ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಅನೇಕ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಈ ಮೈದಾನ ಸಾಕಷ್ಟು ಕ್ರೀಡಾ ಪ್ರತಿಭೆಗಳನ್ನು ರಾಜ್ಯ ಹಾಗೂ ದೇಶಕ್ಕೆ ಕೊಟ್ಟಿದೆ. ವಿದ್ಯಾರ್ಥಿಗಳಿಗಾಗಿ, ಹಳೆ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟ ಆಯೋಜಿಸುವುದು ಸಾಮಾನ್ಯ. ಆದರೆ ಪೋಷಕರಿಗೂ ಅವಕಾಶ ಕೊಡಬೇನ್ನುವ ದಿಸೆಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಪೋಷಕರಿಗೆ ಕ್ರೀಡಾಕೂಟವನ್ನು ಆಯೋಜಿಸಿ ಅವರೊಳಗಿರುವ ಕ್ರೀಡಾ ಪ್ರತಿಭೆಯನ್ನು ಹೊರತರುವ ಕಾರ್ಯಕ್ಕೆ ಶಾಲಾ ಎಸ್‍ಡಿಎಂಸಿ, ಶಾಲಾ ವಾರ್ಷಿಕೋತ್ಸವ ಸಮಿತಿ, ಹಳೆವಿದ್ಯಾರ್ಥಿ ಸಂಘ, ಮುಖ್ಯೋಪಾಧ್ಯಾಯರು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಕ್ರೀಡಾಪಟು, ಶಾಲೆಯ ಹಳೆ ವಿದ್ಯಾರ್ಥಿ ಅಬ್ದುಲ್ ಮುನಾಫ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಹೆಮ್ಮಾಡಿ ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ಅಧ್ಯಕ್ಷತೆ ವಹಿಸಿದ್ದರು. ಜನತಾ ಪ್ರೌಢ ಶಾಲೆಯ ಶಿಕ್ಷಕ ಜಗದೀಶ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ನಿವೃತ್ತ ಶಿಕ್ಷಕ ಶಂಕರ ಮಡಿವಾಳ, ಸಿ.ಆರ್.ಪಿ.ಒ ರಾಮನಾಥ ಮೇಸ್ತ ಮಾತನಾಡಿದರು.
ಗ್ರಾ.ಪಂ ಸದಸ್ಯೆ ರತ್ನಾ ದೇವಾಡಿಗ, ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷ ದೇವಪ್ಪ ಪೂಜಾರಿ, ಅಧ್ಯಕ್ಷ ಶಾಂತಾರಾಮ್ ಭಟ್, ಕುಂದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ನಾರಾಯಣ, ಪೋಷಕ ರಾಘವೇಂದ್ರ. ಬಿ ಮೊಗವೀರ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ವಿ. ದಿವಾಕರ ಸ್ವಾಗತಿಸಿ, ಶಿಕ್ಷಕಿ ವಿಜಯಲಕ್ಷ್ಮೀ ಧನ್ಯವಾದವಿತ್ತರು. ಶಿಕ್ಷಕಿ ಸುಶೀಲಾ ನಿರೂಪಿಸಿದರು.