ಕುಂದಾಪುರ ಮಿರರ್ ಸುದ್ದಿ…
ಕೋಟ: ಕೃಷಿಯಿಂದಲೇ ವಾರ್ಷಿಕ 1 ಕೋಟಿ ರು.ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೆಕ್ಕಟೆ ಗ್ರಾಮದ ಪ್ರಗತಿಪರ ಕೃಷಿಕ, ಹೈನೋದ್ಯಮಿ ರಮೇಶ್ ನಾಯಕ್ ಅವರು ಕೇಂದ್ರ ಸರ್ಕಾರ ನೀಡುವ `ಬಿಲಿಯನೇರ್ ರೈತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಡಿ.7ರ ಗುರುವಾರ ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಮೇಶ್ ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರಗತಿಪರ ಕೃಷಿಕ ಹಾಗೂ ಉದ್ಯಮಿಯಾಗಿರುವ ರಮೇಶ್ ನಾಯಕ್, ವೈವಿಧ್ಯಮಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ರುವ ತಮ್ಮ 13 ಎಕರೆ ಜಾಗದಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ. 11 ವಿವಿಧ ಜಾತಿಯ, 1,634 ವಿವಿಧ ತಳಿಯ ಹಣ್ಣಿನ ಗಿಡ ನೆಟ್ಟು ನೈಸರ್ಗಿಕ ಕೃಷಿಯ ಮೂಲಕ ಉತ್ತಮ ಫಸಲು ಬೆಳೆಯುತ್ತಿದ್ದಾರೆ.
ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಉಪಯೋಗಿಸಿ 30 ಸಾವಿರ ಅನಾನಸ್ ಗಿಡ ನಾಟಿ ಮಾಡಿದ್ದಾರೆ. 2 ಗಿಡಗಳ ಮಧ್ಯದಲ್ಲಿ ಪಪ್ಪಾಯಿ ಗಿಡಗಳನ್ನು ಅಂತರದ ಬೆಳೆಯಾಗಿ ಬೆಳೆಸಿದ್ದಾರೆ. ಈ ನಡುವೆ, 285 ಹಲಸು ಹಾಗೂ 500 ಡ್ರಾಗನ್ ಫೂಟ್ ಸೇರಿ ಒಟ್ಟು 1,634 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ವಾರ್ಷಿಕವಾಗಿ ಸುಮಾರು 1 ಕೋಟಿ ರು.ಗೂ ಅಧಿಕ ವಹಿವಾಟು ನಡೆಸುತ್ತಿದ್ದಾರೆ. ತಮ್ಮ ಹೊಲದಲ್ಲಿ ಇಂಗು ಗುಂಡಿಗಳನ್ನು ತೋಡಿ, ಅಂತರ್ಜಲದ ಮಟ್ಟ ಹೆಚ್ಚಲು ಕಾರಣರಾಗಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಯನ್ನೂ ನಡೆಸುತ್ತಿದ್ದಾರೆ. ಆ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಜೊತೆಗೆ, ತೆಕ್ಕಟ್ಟೆಯಲ್ಲಿ ಅವರು ರೈಸ್ ಮಿಲ್ ಕೂಡ ಹೊಂದಿದ್ದಾರೆ.
ಪ್ರಶಸ್ತಿ ಆಯ್ಕೆಯಾಗಿದ್ದು ಸಂತೋಷವನ್ನು ನೀಡಿದೆ
`ಬಿಲಿಯನೇರ್‍ರೈತ ಪ್ರಶಸ್ತಿ’ಗೆ ಆಯ್ಕೆ ಯಾಗಿದ್ದಕ್ಕೆ ತುಂಬಾ ಖುಷಿಯಾಗಿದೆ. ಕೃಷಿ ಉದ್ದೇಶಕ್ಕಾಗಿ ಜಾಗ ಖರೀದಿ ಮಾಡಿರಲಿಲ್ಲ. ಕೃಷಿಯನ್ನು ಉದ್ಯಮವನ್ನಾಗಿ ಮಾಡ ಬೇಕು ಎನ್ನುವ ವ ಆಸೆ ಇತ್ತು. ಹೀಗಾಗಿ, ಮೊದಲೇ ಖರೀದಿಸಿದ್ದ 13 ಎಕರೆ ಜಾಗದಲ್ಲಿ ಕೃಷಿ ಮಾಡಿದ್ದೇನೆ. ಆರು ತಿಂಗಳು ಅಲೆದಾಟ ನಡೆಸಿ, ಪ್ರಗತಿ ಪರ ಕೃಷಿಕರ ಬಳಿ ತೆರಳಿ ಅವರಿಂದ ಮಾಹಿತಿ ಪಡೆ ದುಕೊಂಡು ಕೃಷಿ ಮಾಡುತ್ತಿದ್ದೇನೆ. ನಾನೇನು ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ. ಬ್ರಹ್ಮಾವರ ಕೃಷಿ ಕೇಂದ್ರದವರು ಶಿಫಾರಸು ಮಾಡಿದ್ದರು ಈ ಹಿನ್ನಲ್ಲೆಯಲ್ಲಿ ಪ್ರಧಾನಮಂತ್ರಿಗಳ ಮೂಲಕ ಪ್ರಶಸ್ತಿ ಸ್ವೀಕರಿಸುವುದೆ ನನ್ನ ಭಾಗ್ಯವಾಗಿದೆ –ರಮೇಶ್ ನಾಯಕ್, ಕೃಷಿಕರು ತೆಕ್ಕಟ್ಟೆ