ಕುಂದಾಪುರ :ವಂಡ್ಸೆ ಶಾಲೆಯಲ್ಲಿ ಪ್ರತಿಭೋತ್ಸವ

0
193

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಶಾಲಾ ವಾರ್ಷಿಕೋತ್ಸವಕ್ಕೆ ಪೂರ್ವಭಾವಿಯಾಗಿ ವಿವಿಧ ಸ್ಪರ್ಧೆಗಳನ್ನು ನಡೆಸುವುದು, ಆ ಸ್ಪರ್ಧೆಗಳ ಬಹುಮಾನ ವಿತರಣೆಗಾಗಿ ಸಭಾ ಕಾರ್ಯಕ್ರಮ ತೀರಾ ದೀರ್ಘವಾಗಿ ಮಕ್ಕಳ ಸಹನೆ ಕೆಡುವುದೂ, ಬಹುಮಾನ ವಿತರಣೆಯನ್ನು ಬೇಗ ಮುಗಿಸಲು ಮಕ್ಕಳನ್ನು ಅವಸರದಲ್ಲಿ ಕಳಿಸಬೇಕಾಗುವುದೂ, ಕೆಲವೊಮ್ಮೆ ದೀರ್ಘವಾದೀತು ಎಂಬ ಕಾರಣಕ್ಕೆ ಸ್ಪರ್ಧೆಗಳ ಸಂಖ್ಯೆಯನ್ನೇ ಕಡಿತಗೊಳಿಸುವುದೂ ತೀರಾ ಸಾಮಾನ್ಯ ಎನಿಸಿಬಿಟ್ಟಿದೆ. ಇದಕ್ಕೆ ಪರ್ಯಾಯವಾಗಿ ವಂಡ್ಸೆ ಶಾಲೆಯಲ್ಲಿ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ “ಪ್ರತಿಭೋತ್ಸವ” ಎಂಬ ವಿನೂತನ ಕಾರ್ಯಕ್ರಮವು ಡಿಸೆಂಬರ್ 18ರಂದು ಸಂಭ್ರಮದಿಂದ ಸಂಪನ್ನಗೊಂಡಿತು.

ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮಾದರಿಯಲ್ಲಿ “ಪ್ರತಿಭೋತ್ಸವ” ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಗಿತ್ತು. ಬೆಳಿಗ್ಗೆ ಎಲ್ಲಾ ಮಕ್ಕಳ ಸಮ್ಮುಖದಲ್ಲಿ ಛದ್ಮವೇಷ ಸ್ಪರ್ಧೆಗಳಿಂದ ಆರಂಭಗೊಂಡ ಕಾರ್ಯಕ್ರಮ ನಂತರ ವಿವಿಧ ಕೊಠಡಿಗಳಲ್ಲಿ ತರಗತಿವಾರು ಚಿತ್ರಕಲೆ, ಭಾಷಣ, ಗಾಯನ, ಕತೆ ಹೇಳುವುದು ಇತ್ಯಾದಿ ಸ್ಪರ್ಧೆಗಳೊಂದಿಗೆ ಮುಂದುವರೆಯಿತು. ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

Click Here

ವಿಭಿನ್ನ ರೀತಿಯ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಈ ಕಾರ್ಯಕ್ರಮದ ವಿಶೇಷ. ವೇದಿಕೆಯ ಮಧ್ಯಭಾಗದಲ್ಲಿ ವಿಜಯವೇದಿಕೆಯನ್ನಿಟ್ಟು ಇಕ್ಕೆಲಗಳಲ್ಲಿ ಅತಿಥಿಗಳನ್ನು ಕುಳ್ಳಿರಿಸಲಾಗಿತ್ತು. ವಿಜಯವೇದಿಕೆಯಲ್ಲಿ ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಬಣ್ಣದ ಕಿರೀಟಗಳನ್ನು ತೊಡಿಸಿ, ಪ್ರಶಸ್ತಿಪತ್ರದೊಂದಿಗೆ ಬಹುಮಾನ ವಿತರಿಸಲಾಯಿತು.

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸಿ.ಆರ್.ಪಿ ನಾಗರಾಜ ಶೆಟ್ಟಿ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಟ್ರಸ್ಟಿ ಜಿ.ಶ್ರೀಧರ ಶೆಟ್ಟಿ, ಗ್ರಾಮ ಪಂಚಾಯತಿ ಸದಸ್ಯರಾದ ಪ್ರಶಾಂತ ಪೂಜಾರಿ, ಶಶಿಕಲಾ ವಂಡ್ಸೆ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಸದಾಶಿವ, ಎಸ್.ಡಿ.ಎಂಸಿ ಉಪಾಧ್ಯಕ್ಷ ರಾಜು, ಶಿಕ್ಷಕವೃಂದದವರು, ಎಸ್.ಡಿ.ಎಂಸಿ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಇನ್ನೊಂದು ವಿಶೇಷತೆಯೆಂದರೆ ಮಕ್ಕಳನ್ನು ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಮತ್ತು ಹೊಯ್ಸಳ ಎಂಬ ನಾಲ್ಕು ತಂಡಗಳನ್ನಾಗಿ ವಿಭಾಗಿಸಿದ್ದು. ಕಾರ್ಯಕ್ರಮದ ಮೊದಲೇ ತಂಡಗಳನ್ನು ರಚಿಸಿದ್ದು ಗರಿಷ್ಠ ಬಹುಮಾನಗಳನ್ನು ಗಳಿಸಿದ ತಂಡಕ್ಕೆ ಸಮಗ್ರ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಇದು ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸಿದ್ದು ತಂಡಗಳಲ್ಲಿ ಪರಸ್ಪರ ಸಹಕಾರದಿಂದ ಭಾಗವಹಿಸಲು ಪ್ರೇರೇಪಿಸಿತು. ಹಿರಿಯ ತರಗತಿಗಳ ಮಕ್ಕಳು ತಮ್ಮ ತಂಡದ ಕಿರಿಯರಿಗೆ ಮಾರ್ಗದರ್ಶನ, ಉತ್ತೇಜನ ನೀಡುತ್ತಿದ್ದುದು ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತು. ಕೊನೆಯಲ್ಲಿ ಸಮಗ್ರ ಬಹುಮಾನ ಗಳಿಸಿದ ಕದಂಬ ತಂಡದ ಸದಸ್ಯರೆಲ್ಲರೂ ಒಟ್ಟಿಗೆ ವೇದಿಕೆಯನ್ನೇರಿ ಟ್ರೋಫಿ ಹಿಡಿದು ಸಂಭ್ರಮಿಸಿದರು.

ಮಕ್ಕಳಿಗೆ ಒಂದು ವಿಶೇಷ ಅನುಭವ ನೀಡುವಲ್ಲಿ ಯಶಸ್ವಿಯಾದ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here