ಉಡುಪಿ ಜಿಲ್ಲಾ ರೈತ ಸಂಘದಿಂದ ರಾಷ್ಟ್ರೀಯ ರೈತರ ದಿನಾಚರಣೆ, ಸಾಧಕ ರೈತರಿಗೆ ಸನ್ಮಾನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಕುಂದಾಪುರದ ಆರ್.ಎನ್.ಶೆಟ್ಟಿ ಮಿನಿ ಸಭಾ ಭವನದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮ ಡಿಸೆಂಬರ್ 23ರಂದು ನಡೆಯಿತು.
ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಪ್ರಗತಿಪರ ಯುವ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಉದ್ಘಾಟಿಸಿದರು.
ಉದ್ಘಾಟನಾ ಮಾತುಗಳನ್ನಾಡಿದ ಅವರು ಭಾರತ ದೇಶದಲ್ಲಿ ಶೇ.70ರಷ್ಟು ಕೃಷಿಕರು ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಕೃಷಿ ಪ್ರಧಾನವಾದ ಭಾರತದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದೆಂದರೆ ರಾಷ್ಟ್ರಗೌರವ ಸಲ್ಲಿಸುವುದೆಂದೇ ಅರ್ಥ. ಕೃಷಿಕರು ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಲು ಏಕರೂಪದ ಕೃಷಿ ಪದ್ದತಿಯಿಂದ ಹೊರಬಂದು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಮಿಶ್ರ ಬೇಸಾಯ ಪದ್ದತಿಯನ್ನು ವೈಜ್ಞಾನಿಕ ಮಾದರಿಯಲ್ಲಿ ಅನುಷ್ಟಾನಿಸಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲಿಯನೇರ್ ರೈತ ಪ್ರಶಸ್ತಿ ಪುರಸ್ಕೃತರಾದ ಕೆದೂರು ಕಾಮಾಕ್ಷಿ ಫಾರಂನ ರೂವಾರಿ ಟಿ.ಗಣೇಶ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಗಣೇಶ ನಾಯಕ್ ಅವರು, ಕೃಷಿಯಲ್ಲಿ ಅಧ್ಯಯನಶೀಲತೆ, ಪ್ರಯೋಗಶೀಲತೆ, ಸುಧಾರಿತ ಕೃಷಿ ಪದ್ದತಿಗಳ ಅಳವಡಿಕೆಯ ಬಗ್ಗೆ ಸದಾ ಕೃಷಿಕರು ಆಸಕ್ತರಾಗಿದ್ದಲ್ಲಿ ಕೃಷಿಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ. ಹೊಸದಾಗಿ ಕೃಷಿ ಮಾಡುವ ಮೊದಲು ಯಶಸ್ವಿ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಬೇಕು. ಅನುಭವಿ ಕೃಷಿಕರು, ಕೃಷಿ ತಜ್ಞರ ಮಾರ್ಗದರ್ಶನ ಪಡೆದುಕೊಳ್ಳಬೇಕು. ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಸಮಗ್ರ ನೀರು ನಿರ್ವಹಣೆ, ಸಸ್ಯ ಸಂರಕ್ಷಣೆ, ಸಸ್ಯಗಳ ಬೆಳವಣಿಗೆಯ ಬಗ್ಗೆ ಸತತ ಆಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ರೈತ ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತೋಟಗಾರಿಕಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮಧುಕರ, ಉಡುಪಿ ಜಿಲ್ಲಾ ರೈತ ಸಂಘದ ಹಂಗಾಮಿ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಹಾಪ್ ಕಾಮ್ಸ್ ಅಧ್ಯಕ್ಷ ಸೀತರಾಮ ಗಾಣಿಗ ಹಾಲಾಡಿ, ಉಡುಪಿ ಜಿಲ್ಲಾ ರೈತ ಸಂಘದ ಖಜಾಂಚಿ ಭೋಜ ಕುಲಾಲ ಹಾಗೂ ವಲಯಾಧ್ಯಕ್ಷರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸತೀಶ ಕಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೈತ ಸಂಘದ ಕಾವ್ರಾಡಿ ವಲಯಾಧ್ಯಕ್ಷ ಶರತ್ಚಂದ್ರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ವಂಡ್ಸೆ ವಲಯಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.