ಗುರುಕುಲದಲ್ಲಿ ಸಾಂಪ್ರದಾಯಿಕ ಸಸ್ಯರಾಶಿ ಅಮೃತವನ ಉದ್ಘಾಟನೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅನಾದಿ ಕಾಲದಿಂದ ಮನುಷ್ಯರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಆರೋಗ್ಯ ಭಾಗ್ಯ ನೀಡಿದ್ದ ಅದೆಷ್ಟೋ ಅಮೂಲ್ಯ ಗಿಡ ಮರಗಳು ಇಂದು ವಿನಾಶದಂಚಿನಲ್ಲಿದ್ದು, ಗುರುಕುಲದಂತಹಾ ಶಿಕ್ಷಣ ಸಂಸ್ಥೆಗಳು ಅಮೂಲ್ಯ ಗಿಡ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ಶ್ಲಾಘನೀಯ ಎಂದು ಮಂಗಳೂರು ವಿಭಾಗ ಎಸಿಎಫ್ ಶ್ರೀಧರ ಪಿ ಹೇಳಿದರು.
ಅವರು ಭಾನುವಾರ ಬೆಳಿಗ್ಗೆ ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಬಿ. ಅಪ್ಪಣ್ಣ ಹೆಗ್ಡೆ ಅವರ 89ನೇ ಹುಟ್ಟು ಹಬ್ಬ ಪ್ರಯುಕ್ತ ಹಮ್ಮಿಕೊಳ್ಳಲಾದ ಅಮೃತವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಈ ಹಿಂದೆ ಇದ್ದ ಕೋಳಿ ಜುಟ್ಟು ಎನ್ನುವ ಕಾಡಿನ ತಳಿ, ಎಬೋನಿ ಎನ್ನುವ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಎಬೋನಿ ಮುಂತಾದ ಮರಗಳು ಅಳಿವಿನಂಚಿನಲ್ಲಿದೆ. ಅಂತಹಾ ಗಿಡಗಳನ್ನೂ ಇಲ್ಲಿ ಬೆಳೆಸಲಾಗುತ್ತಿರುವುದು ಸಂತಸದ ವಿಚಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬಿ. ಅಪ್ಪಣ್ಣ ಹೆಗ್ಡೆ, ನಮಗೆ ಉಸಿರಾಡುವ ಆಮ್ಲಜನಕ ನೀಡುವ ಸಸ್ಯರಾಶಿಯನ್ನು ಇಂದು ನಾವು ಕಡೆಗಣಿಸುತ್ತಿದ್ದೇವೆ. ಮರಗಿಡಗಳನ್ನು ನಿರ್ಲಕ್ಷ್ಯ ಮಾಡಿದರೆ ನಮ್ಮನ್ನು ನಾವು ನಿರ್ಲಕ್ಷ್ಯ ಮಾಡಿದಂತೆ. ಯಾರೋ ಬೆಳಿಸಿದ, ಕಡಿಯದೇ ಬಿಟ್ಟ ಮರಗಳಿಂದ ನಾವು ಉಸಿರಾಡುತ್ತಿದ್ದೇವೆ, ಅದೇ ರೀತಿ ನಾವು ನಮ್ಮ ಮುಂದಿನ ಪೀಳಿಗೆಗೆ ಮರಗಳನ್ನು ನೆಡುವುದರ ಜೊತೆಗೆ ಬೆಳೆಸುವ ಪಣ ತೊಡಬೇಕಿದೆ ಎಂದರು.
ಈ ಸಂದರ್ಭ ಗುರುಕುಲ ಪಬ್ಲಿಕ್ ಸ್ಕೂಲಿನ ಮುಖ್ಯಸ್ಥ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಆಡಳಿತಾಧಿಕಾರಿ ಅನುಪಮಾ ಶೆಟ್ಟಿ, ಸಮಾಜ ಸೇವಕ ಮಾಧವ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.
ಸಹಶಿಕ್ಷಕಿ ವಿಶಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸೀತಾ ಅಶೋಕ(ಶೋಕ ನಿವಾರಕ), ಹಲಸು, ಹೆಬ್ಬಲಸು, ರೋಹಿತಕ್ಕ (ಬಂಟ ಕೆಂಪುಳ), ಕಿರಾಲು ಬೋಗಿ, ಕಕ್ಕೆ ಮರ, ಅಂಟುವಾಳ, ಮಾವು (ಬೇರೆ ಬೇರೆ ಜಾತಿಯ ಮಾವು), ಲಕ್ಷ್ಮಿ ತರು, ನಾಗಸಂಪಿಗೆ (ಒರಿಜಿನಲ್), ರಾಮಪತ್ರೆ, ಕೋಳಿ ಕೊಕ್ಕು, ಬೀಟೆ, ಬೇಂಗ, ರುದ್ರಾಕ್ಷಿ, ಕದಂಬ, ಹೊಳೆ ದಾಸವಾಳ, ನೇರಳೆ ಗಿಡ(ನೀಲಿ), ವಾಟೆ ಹುಳಿ, ಜಾರಿಗೆ, ಬೆಟ್ಟದ ನೆಲ್ಲಿ, ರಕ್ತ ಚಂದನ ಮೊದಲಾದ ಗಿಡಗಳನ್ನು ಅಮೃತವನದಲ್ಲಿ ನೆಡಲಾಗಿದೆ.