ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಸೇವಾ ಟ್ರಸ್ಟ್, ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು ಸಮಾಜಮುಖಿಯಾಗಿ ಇನ್ನಷ್ಟು ಕಾರ್ಯಯೋಜನೆಗಳನ್ನು ಅನುಷ್ಠಾನಿಸುವ ಗುರಿ ಹೊಂದಿದೆ. ಕಳೆದ ಹತ್ತು ವರ್ಷಗಳಿಂದ ನಮ್ಮ ತಂದೆ-ತಾಯಿ ಹೆಸರಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಟ್ರಸ್ಟ್ ಮೂಲಕ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದೆ ಎಂದು ಟ್ರಸ್ಟ್ ಪ್ರವರ್ತಕರಾದ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಹೇಳಿದರು.
ಅವರು ಮೊಳಹಳ್ಳಿಯಲ್ಲಿ ಟ್ರಸ್ಟ್ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಕುಂದಾಪುರ ತಾಲೂಕಿನ ಸರಕಾರಿ ಶಾಲಾ ಕಾಲೇಜಿನ ಮಕ್ಕಳಿಗೆ ಉಚಿತ ಆಪ್ತ ಸಮಾಲೋಚನೆ ಮತ್ತು ಪೂರಕ ಕಾರ್ಯಾಗಾರಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ನಡೆಸಿಕೊಡುವುದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬಲ್ಲಂತಹ ಚಟುವಟಿಕೆಗಳನ್ನು ಆಯೋಜಿಸುವುದು, ಶಾಲಾ ಕಾಲೇಜು ಮಕ್ಕಳಿಗೆ ಅಗತ್ಯ ವಿರುವ ಪಾಠ ಸಾಮಗ್ರಿಗಳನ್ನು ಒದಗಿಸುವುದು, ಕುಂದಾಪುರ ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಪುನರ್ಬಲನ ನೀಡುವುದು ಮತ್ತು ಅವರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು ಎಂದರು.
ಆರೋಗ್ಯ ನಿಮಿತ್ತ ನೆರವು ಬಯಸಿ ಬರುವ ಕ್ಷೇತ್ರದ ಜನತೆಗೆ ಸಹಾಯ ಒದಗಿಸುವುದು ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಿಗೆ ನೆರವಾಗುವುದು, ಸಮುದಾಯದ ಮಹಿಳೆಯರಿಗೆ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು, ಆರ್ಥಿಕವಾಗಿ ಸ್ವತಂತ್ರರಾಗಲು ಸಬಲಗೊಳಿಸುವುದು. ವಿವಿಧ ಕಂಪೆನಿಗಳ ನೆರವಿನಿಂದ ಉದ್ಯೋಗ ಮೇಳವನ್ನು ನಡೆಸಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳನ್ನು ಒದಗಿಸಲು ಶ್ರಮಿಸುವುದು, ತುರ್ತು ಸಂದರ್ಭದಲ್ಲಿ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರಿಗೆ ತುರ್ತು ಅಗತ್ಯ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಶ್ರಮಿಸಲಿದೆ ಎಂದರು.
ಕುಂದಾಪುರ ಕ್ಷೇತ್ರದ ಜನ ಇದರ ಸದುಪಯೋಗ ಪಡೆದುಕೊಳ್ಳಬಹುದು. ನೆರವಿನ ಅವಶ್ಯಕತೆ ಇರುವವರು ಟ್ರಸ್ಟ್‍ನ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಪ್ರಮುಖವಾಗಿ ಶಾಲೆಗಳಲ್ಲಿ ಮನಶಾಸ್ತ್ರಜ್ಞರ ಮೂಲಕ ಮಾಹಿತಿಯನ್ನು ನೀಡಿ ಅಗತ್ಯ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಹಾಗೆಯೇ ಸ್ವ-ಉದ್ಯೋಗಕ್ಕೆ ಪೂರಕವಾದ ತರಬೇತಿಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಟ್ರಸ್ಟ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿದೆ ಎಂದರು.
ಟ್ರಸ್ಟ್‌ನ ಯೋಜನಾಧಿಕಾರಿಯಾಗಿ ಗಿರೀಶ್ ಎಂ.ಎನ್. ಕೋಶಾಧಿಕಾರಿಯಾಗಿ ದೀಪಿಕಾ ಡಿ.ಹೆಗ್ಡೆ, ಸದಸ್ಯರುಗಳಾಗಿ ಸಂತೋಷ್ ಕಾಂಚನ್, ಸುಜಾತ, ಗಣೇಶ್ ಎನ್., ಸರಸ್ವತಿ ಎಸ್ ಹೆಗ್ಡೆ, ಪೂರ್ಣಿಮಾ ಆರ್ ಶೆಟ್ಟಿ, ಎಂ.ಮಹೇಶ್ ಹೆಗ್ಡೆ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಟ್ರಸ್ಟ್‌ನ ಯೋಜನಾಧಿಕಾರಿ, ಮನಃಶಾಸ್ತ್ರ ಉಪನ್ಯಾಸಕ ಗಿರೀಶ್ ಎಂ.ಎನ್ ,ಟ್ರಸ್ಟ್ ಕೋಶಾಧಿಕಾರಿ ದೀಪಿಕಾ ಡಿ.ಹೆಗ್ಡೆ ಉಪಸ್ಥಿತರಿದ್ದರು.