ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲು ಬಡವರ ಅಭಿವೃದ್ಧಿಯಾಗಬೇಕು. ಇದನ್ನು ಗಮನದಲ್ಲಿ ಇಟ್ಟಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸದೃಡವಾಗಿದೆ. 2047ರ ಸಮಯದಲ್ಲಿ ವಿಶ್ವದಲ್ಲೇ ಭಾರತ ಪ್ರಥಮ ಸ್ಥಾನಕ್ಕೇರಲು ನರೇಂದ್ರ ಮೋದಿ ಅವರು ಗುರಿಹೊಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಅವರು ಸಿದ್ದಾಪುರ ಗ್ರಾಮ ಪಂಚಾಯತ್ ಮತ್ತು ಕೆನರಾ ಬ್ಯಾಂಕ್ ಸಿದ್ದಾಪುರ ಶಾಖೆಯ ಸಹ ಯೋಗದೊಂದಿಗೆ ಶನಿವಾರ ಸಿದ್ದಾಪುರ ಶ್ರೀ ರಂಗನಾಥ ಸಭಾ ಭವನದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ನೇತ್ರತ್ವದ ನರೇಂದ್ರ ಮೋದಿ ಸರಕಾರ ಬಡವರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಿಶ್ವಕರ್ಮ ಯೋಜನೆಯ ಮೂಲಕ ಬ್ಯಾಂಕ್ ಮೂಲಕ ಒಂದು ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಈ ಸಾಲಕ್ಕೆ ನರೇಂದ್ರ ಮೋದಿ ಅವರೇ ಗ್ಯಾರಂಟಿಯಾಗಿದ್ದಾರೆ. ವಿಕಾಸಿತ ಭಾರತ ಕಾರ್ಯಕ್ರಮದ ಮೂಲಕ ಕೇಂದ್ರ ಸರಕಾರದ ಜನಪರ ಯೋಜನೆಗಳ ಕುರಿತು ಅರಿವು ಮೂಡಿಸುವ ಮಹತ್ವದ ಕಾರ್ಯ ಗ್ರಾ.ಪಂ. ಮಟ್ಟದಲ್ಲಿ ನಡೆಯುತ್ತಿದೆ. ಗ್ರಾಮೀಣ ಜನತೆ ಸರಕಾರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಉದ್ದೇಶಿತ ಫಲಾನುಭವಿಗಳಿಗೆ ಸಮಯಕ್ಕೆ ಅನುಗುಣವಾಗಿ ಸರಕಾರದ ಯೋಜನೆಗಳನ್ನು ತಲುಪುವುದನ್ನು ಖಾತ್ರಿಪಡಿಸುವ ಮೂಲಕ, ಕೇಂದ್ರ ಸರಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಖಾತ್ರಿಯನ್ನು ಸಾಧಿಸುವ ಗುರಿಯನ್ನು ವಿಕಾಸಿತ ಭಾರತ ಸಂಕಲ್ಪಯಾತ್ರೆ ಹೊಂದಿದೆ ಎಂದರು.
ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಶಾಸಕ ಭೈರತಿ ಬಸವರಾಜ್ ಬಸವರಾಜ್, ದಾಸರಹಳ್ಳಿ ಶಾಸಕ ಮುನಿರಾಜು, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಶ್ರೀಲತಾ ಶೆಟ್ಟಿ, ಉಡುಪಿ ಜಿಲ್ಲಾ ಆರೋಗ್ಯ ಮಿತ್ರ ಸುಜನ್ ಮಾಲಾ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ| ಸದಾನಂದ ಆಚಾರ್ಯ, ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕ ಗಿರೀಶ್ ಶಾನ್‍ಭೋಗ್, ಸಿದ್ದಾಪುರ ಶಾಖೆಯ ಹಿರಿಯ ಪ್ರಬಂಧಕ ಸಮೀರ್‍ಕುಮಾರ ದೇಸಾಯಿ, ರುಡ್‍ಸೆಟ್ ಬ್ರಹ್ಮಾವರ ಸಂತೋಷ್ ಶೆಟ್ಟಿ, ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ| ನಾಗಭೂಷಣ ಉಡುಪ, ಅಂಚೆ ಇಲಾಖೆಯ ಜೀವನ್ ಕೆ., ಗ್ರಾ.ಪಂ. ಸದಸ್ಯರು ಹಾಗೂ ಸಿಬಂದಿಗಳು, ಬ್ಯಾಂಕ್ ಸಿಬಂದಿಗಳು, ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರತಿಜ್ಞಾವಿ„ ಬೋದಿಸಿದರು. ಉಜ್ವಲ್ ಯೋಜನಾ ಫಲಾನುಭವಿಗೆ ಬಾಂಡ್ ವಿತರಿಸಿದರು. ಡ್ರೋನ್ ಪ್ರಾತ್ಯಕ್ಷಿಕೆ ಜರಗಿತು.
ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಸ್ವಾಗತಿಸಿದರು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಉಡುಪಿ ಸೀನಿಯರ್ ಕೌನ್ಸಿಲರ್ ಮೀರಾ ಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಕಾರ್ಯದರ್ಶಿ ಗಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿ ಉದಯ ಮಡಿವಾಳ ವಂದಿಸಿದರು.