ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ಸತತ 12ನೇ ವರ್ಷದ ‘ಇನಿದನಿ’ ಸುಮಧುರ ಕನ್ನಡ ಚಿತ್ರಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ ಜನವರಿ 14 ರವಿವಾರ ಸಂಜೆ 6 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ ಎಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ತಿಳಿಸಿದರು.
ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಹನ್ನೇರಡರ ಸಂಭ್ರಮದಲ್ಲಿರುವ ಇನಿದನಿಯ ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಗಾಯಕ/ಗಾಯಕಿಯರಾದ ಅಜೇಯ್ ವಾರಿಯರ್, ಮೋಹನಕೃಷ್ಣ, ಶಶಿಕಲಾ ಸುನೀಲ್, ಸಮನ್ವಿತಾ ಶರ್ಮ, ಭಾಗವಹಿಸಲಿದ್ದಾರೆ. ಇವರೊಂದಿಗೆ ಮಂಗಳೂರಿನ ವೈ ಎನ್. ರವೀಂದ್ರ, ಸ್ಥಳೀಯರಾದ ಅಶೋಕ ಸಾರಂಗ್, ಯುವ ಪ್ರತಿಭೆ ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ ಹಾಗೂ ಕಮಲ್ ಕಿಶೋರ್ ಕುಂದಾಪುರ ಭಾಗವಹಿಸಲಿದ್ದು, ಹಿಮ್ಮೇಳದಲ್ಲಿ ರಾಜೇಶ್ ಭಾಗವತ್-ತಬಲಾ, ವಾಮನ್ ಕಾರ್ಕಳ-ಪ್ಯಾಡ್ ಮತ್ತು ಡ್ರಮ್ಸ್, ಗಣೇಶ್ ನವಗಿರಿ-ಕಾಂಗೋ, ಭಾಸ್ಕರ ಕುಂಬ್ಳೆ- ಡೋಲಕ್, ಶಿಜಿಮೂನ್ ಕ್ಯಾಲಿಕಟ್ ಹಾಗೂ ದೀಪಕ್ ಶಿವಮೊಗ್ಗ-ಕೀಬೋರ್ಡ್, ವರುಣ್-ಕೊಳಲು, ಸುಮುಖ್ ಆಚಾರ್ಯ-ಸಿತಾರ್, ಮೆಲ್ವಿನ್-ಟ್ರಂಪೆಟ್, ಟೋನಿ ಡಿ’ಸಿಲ್ವ ಬೇಸ್ ಗಿಟಾರ್ ಮತ್ತು ಮಂಗಳೂರಿನ ರಾಜ್ ಗೋಪಾಲ ಆಚಾರ್ಯ- ಗಿಟಾರ್ ನುಡಿಸಲಿದ್ದು ತಂಡದ ನೇತೃತ್ವ ವಹಿಸಲಿದ್ದಾರೆ ಎಂದರು.
ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಾಗಿ ಹಳೆಯ ಗೀತೆಗಳ ಮಾಧುರ್ಯ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ 2010 ರಲ್ಲಿ ಇನಿದನಿ ವಿನೂತನ ರೀತಿಯ ಸಂಗೀತ ರಸಮಂಜರಿಯೊಂದು ವಿಭಿನ್ನ ಶೈಲಿಯೊಂದಿಗೆ ಕುಂದಾಪುರಕ್ಕೆ ಪರಿಚಯಿಸಲ್ಪಟ್ಟಿತ್ತು. ಅದರಲ್ಲಿ 70-80ರ ದಶಕದ ಕನ್ನಡ ಚಲನಚಿತ್ರದ ಹಾಡುಗಳನ್ನಷ್ಟೇ ಹಾಡಿಸಲಾಗುತ್ತಿತ್ತು. ಈ ಕಾರ್ಯಕ್ರಮವು ಸಂಗೀತದ ಮೇಲಿನ ಶ್ರದ್ದೆ ಮತ್ತು ಪ್ರಾಮಾಣಿಕತೆಯ ಪ್ರತೀಕ, ಅಚ್ಚುಕಟ್ಟಾದ ಆಯೋಜನೆ, ಮಿಮಿಕ್ರಿ ಇಲ್ಲದ, ಡ್ಯಾನ್ಸ್ ಇಲ್ಲದ, ಸಂಗೀತದ ವಿಷಯ ಬಿಟ್ಟು ಇನ್ನೇನನ್ನು ಮಾತನಾಡದಿರುವ, ಪರಿಶುದ್ಧವಾದ ಸಂಗೀತ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇನಿದನಿಯಿಂದ ಮನಸೂರೆಗೊಂಡ ಪ್ರೇಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಯಿತು. 2010ರಲ್ಲಿ 150 ಮಂದಿ ಪ್ರೇಕ್ಷಕರಿದ್ದ ಇನಿದನಿಗೆ ಇದೀಗ 8 ಸಾವಿರಕ್ಕೂ ಅಧಿಕ ಮಂದಿ ಕೇಳುಗರು ಸೇರುತ್ತಾರೆ. ಮುಂದಿನ ವರ್ಷದ ಇನಿದನಿಗಾಗಿ ಕಾತುರದಿಂದ ಕಾಯುತ್ತಾರೆ. ಒಟ್ಟಿನಲ್ಲಿ ಇನಿದನಿ ಎಂದರೆ ಶಿಸ್ತುಬದ್ದವಾದದ್ದು, ಸಮಯಪಾಲನೆ ಮಾಡುವಂತದ್ದು ಎಂಬ ಖ್ಯಾತಿಗೆ ಒಳಗಾಗಿದೆ. ಈ ಇನಿದನಿಯ ನೇತೃತ್ವದ ಹೊಣೆ ಹೊತ್ತದ್ದು ಕಲಾಕ್ಷೇತ್ರ- ಕುಂದಾಪುರ ಟ್ರಸ್ಟ್. ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಪ್ರಾಮಾಣಿಕ ಕಾಳಜಿಯ ಪ್ರತಿರೂಪವಾದ ಕಲಾಕ್ಷೇತ್ರ ಸಂಸ್ಥೆಯು ಈಜು ತರಬೇತಿ, ಸುಗಮ ಸಂಗೀತ ತರಬೇತಿ, ಕನ್ನಡ ರಾಜ್ಯೋತ್ಸವ ಆಚರಣೆ, ವಿಚಾರ ಸಂಕಿರಣ, ಚಲನಚಿತ್ರ ಪ್ರದರ್ಶನ, ಯಕ್ಷಗಾನ, ತಾಳಮದ್ದಲೆ, ಹುಲಿವೇಷ ನೃತ್ಯ ಆಯೋಜನೆ, ಕುಂದಾಪ್ರ ಕನ್ನಡ ದಿನಾಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕುಂದಾಪುರದ ಜನತೆಗೆ ನೀಡುತ್ತಲೇ ಬಂದಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಗೀತಗಾಯನ ಕಾರ್ಯಕ್ರಮದ ಪ್ರಮುಖರಾದ ಸನತ್ ಕುಮಾರ್ ರೈ, ಕೆ,ಆರ್ ನಾಯಕ್, ರಾಜೇಶ ಕಾವೇರಿ, ಪ್ರಶಾಂತ್ ಸಾರಂಗ್ ಉಪಸ್ಥಿತರಿದ್ದರು.