ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ದೇಶದ ಪ್ರಗತಿಗೆ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಯುವ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಮತ್ತು ಯುವನಾಯಕತ್ವದ ಮಹತ್ವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಜೆ.ಎಂ.ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮೂಡ್ಲಕಟ್ಟೆ ಐ.ಎಮ್.ಜೆ.ಐ.ಐಸ್.ಸಿ ಯಂಗ್ ಲೀಡರ್ ಅವಾರ್ಡ್-2024 ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯ ಮೂಲ ಉದ್ದೇಶ ಯುವ ನಾಯಕತ್ವವನ್ನು ಉತ್ತೇಜಿಸುವುದು ಮತ್ತು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು. ಒಬ್ಬ ವಿದ್ಯಾರ್ಥಿ ಯುವ ನಾಯಕನಾಗಿ ರೂಪುಗೊಳ್ಳಬೇಕಾದರೆ ಅವನಿಗೆ ಇರಬೇಕಾದ ಅರ್ಹತೆ ಮತ್ತು ತಯಾರಿ ಹೇಗಿರಬೇಕು ಮತ್ತು ಸಂವಹನ ಕಲೆಯು ವಿದ್ಯಾರ್ಥಿ ಜೀವನದಲ್ಲಿ ಹೇಗೆ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸ್ಪರ್ಧೆ ಆಯೋಜನೆಯ ಪರಿಕಲ್ಪನೆಯಾಗಿದೆ. ಸ್ಪರ್ಧೆಯ ಅಂತಿಮ ಸುತ್ತು ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ.12 ಸ್ವಾಮಿ ವಿವೇಕಾನಂದ ಜನ್ಮದಿನದಂದು ಕಾಲೇಜಿನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|| ರಾಮಕೃಷ್ಣ ಹೆಗ್ಡೆ ತಿಳಿಸಿದರು.
ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲೆ ಡಾ| ಪ್ರತಿಭಾ ಪಟೇಲ್ ಎಮ್ ಮಾತನಾಡಿ, ಈ ಸ್ಪರ್ಧೆಯನ್ನು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಯ್ದ ಪಿ.ಯು ಸಿ. ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು ಸ್ಪರ್ಧೆಯಲ್ಲಿ ಸರಿ ಸುಮಾರು 20 ಕ್ಕೂ ಹೆಚ್ಚಿನ ಕಾಲೇಜಿನ 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೊದಲನೆಯ ಹಂತವು ‘ಜಸ್ಟ್ ಆ ಮಿನಿಟ್’ ಎನ್ನುವ ಸ್ಪರ್ಧೆಯಾಗಿದ್ದು ಸ್ಪರ್ಧಿಸುವ ವಿದ್ಯಾರ್ಥಿಯು ತಾನು ಆಯ್ಕೆ ಮಾಡಿದ ವಿಷಯದ ಕುರಿತು ಒಂದು ಅಥವಾ ಎರಡು ನಿಮಿಷದಲ್ಲಿ ಮಾತನಾಡಬೇಕು. ಈ ಹಂತದಲ್ಲಿ ವಿದ್ಯಾರ್ಥಿಯ ಸಂವಹನ ಕಲೆ, ವಿಷಯದ ನೈಪುಣ್ಯತೆ ಹಾಗು ಸ್ಪಷ್ಟತೆ ಆದರದ ಮೇಲೆ ಅಗ್ರ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಆಯಾ ಕಾಲೇಜಿನಲ್ಲೇ ನೀಡಲಾಗಿದೆ. ಆಯ್ಕೆಗೊಂಡ ಈ ವಿದ್ಯಾರ್ಥಿಗಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮೊದಲ ಹಂತದಲ್ಲಿ ಸ್ಪರ್ದಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಈಗಾಗಲೇ 90 ಕಾಲೇಜಿನ 60 ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು ಜನವರಿ 12 ರಂದು ಮೂಡ್ಲಕಟ್ಟೆ ಕ್ಯಾಂಪಸ್ ನಲ್ಲಿ ನೆಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಪಪ್ರಾಂಶುಪಾಲರಾದ ಪ್ರೊ ಜಯಶೀಲ ಕುಮಾರ್ ಮಾತನಾಡಿ, ಯಂಗ್ ಲೀಡರ್ ಅವಾರ್ಡ್ 2024 ಇದರ ಅಂತಿಮ ಸ್ಪರ್ಧೆಯನ್ನು ಜನವರಿ 12 ರಂದು ಮೂಡ್ಲಕಟ್ಟೆ ಕ್ಯಾಂಪಸ್ ನಡೆಯಲಿದೆ. ಸ್ಪರ್ಧೆಯಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಯ್ಕೆಗೊಂಡ ಪ್ರತಿಷ್ಠಿತ ಪಿ.ಯು ಸಿ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಸ್ಪರ್ಧೆ ರೋಚಕವಾಗಿ ಮೂಡಿಬರಲಿದೆ. ಅಂತಿಮ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗೆ ಐ ಎಮ್.ಜಿ. ಐಸ್.ಸಿ ಯಂಗ್ ಲೀಡರ್ ಅವಾರ್ಡ್ 2024 ನೀಡಲಾಗುತ್ತದೆ. ವಿಜೇತ ವಿದ್ಯಾರ್ಥಿ ಆಕರ್ಷಕ ಟ್ರೋಫಿ ಜೊತೆಯಲ್ಲಿ ನಗದು ಬಹುಮಾನ ರೂಪಾಯಿ 5000 ಮತ್ತು ಪ್ರಮಾಣ ಪತ್ರ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ನಗದು ಬಹುಮಾನ ರೂಪಾಯಿ 2000 ಮತ್ತು ಪ್ರಮಾಣ ಪತ್ರ ನೀಡಲಾಗುವುದು.
ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ನ ಮಾಜಿ ಡಿಸ್ಟ್ರಿಕ್ಸ್ ಗವರ್ನರ್ ಹಾಗು ಅಂತಾರಾಷ್ಟ್ರೀಯ ಮೋಟಿವೇಶನಲ್ ಸ್ಪೀಕರ್ ನೀಲಕಂಠ ಎಮ್ ಹೆಗ್ಡೆ ಅವರು ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರತಿಭಾ ಪಟೇಲ್ ಎಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಮತ್ತು ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ||ರಾಮಕೃಷ್ಣ ಹೆಗ್ಡೆ ಹಾಗೂ ಉಪಪ್ರಾಂಶುಪಾಲರು ಉಪಸ್ಥಿತರಿರುವರು.
ಸಮಾರೋಪ ಸಮಾರಂಭದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಅವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಐ. ಎಮ್. ಜೆ. ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸಿದ್ಧಾರ್ಥ ಜೆ ಶೆಟ್ಟಿಯವರು ವಹಿಸಲಿದ್ದಾರೆ ಎಂದರು.