ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಅಭಿಯಾನದ ಅಂಗವಾಗಿ ಕುಂದಾಪುರ ತಾಲೂಕು ಕೆದೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಕಾಲೋನಿಗಳ ಭೇಟಿ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆಹಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಮೀನುಗಾರಿಕಾ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಮಧ್ಯಾಹ್ನದ ಬಳಿಕ ಕೊರಗ ಕಾಲೋನಿಗಳ ಭೇಟಿ, ಸಮಸ್ಯೆ ಆಲಿಕೆ, ಪರಿಹಾರ ಕ್ರಮಗಳ ಕಾರ್ಯಕ್ರಮ ನಡೆಯಿತು. ಹೊಸಮಠದಲ್ಲಿರುವ ಕೊರಗ ಕಾಲೋನಿಗೆ ಭೇಟಿ ನೀಡಲಾಯಿತು. ಈ ಸಂದರ್ಭ ಸಾಂಪ್ರದಾಯಿಕ ಡೋಲು ಭಾರಿಸುವಿಕೆಯ ಮೂಲಕ ಸ್ವಾಗತಿಸಿಕೊಳ್ಳಲಾಯಿತು. ಕಾಲೋನಿಯ ಎಲ್ಲಾ ಕೊರಗ ಕುಟುಂಬಕ್ಕೆ ಭೇಟಿ ನೀಡಿದರು.
ಬಳಿಕ ಅಲ್ಲಿ ಸಭೆ ನಡೆಸಿ ಕೊರಗ ಕುಟುಂಬಗಳ ಕುಂದುಕೊರತೆ ಅವಲೋಕಿಸಲಾಯಿತು. ಈ ತನಕ ಅಡುಗೆ ಅನಿಲ ಸಂಪರ್ಕವೇ ಇಲ್ಲದ ಕೊರಗ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಲು ತಹಶೀಲ್ದಾರ್ ಸಮ್ಮುಖದಲ್ಲಿಯೇ ಫಲಾನುಭವಿಗಳ ಹೆಸರು ಬರೆಸಿಕೊಂಡು ಕೂಡಲೇ ಗ್ಯಾಸ್ ಸಂಪರ್ಕ ಒದಗಿಸಲು ಸೂಚಿಸಲಾಯಿತು. ಆರ್ಹರಿದ್ದು ವಿಧವಾವೇತನ, ಸಂಧ್ಯಾ ಸುರಕ್ಷಾ ಸೌಲಭ್ಯವಿಲ್ಲದ ಕುಟುಂಬಗಳಿಗೆ ಕೂಡಲೇ ಸೌಲಭ್ಯ ಕಲ್ಪಿಸಿಕೊಳ್ಳಲು ಸೂಚನೆ ನೀಡಲಾಯಿತು. ಸಮುದಾಯ ಭವನ ನಿರ್ಮಾಣದ ಕುರಿತು ಉದ್ಯೋಗ ಖಾತರಿ ಯೋಜನೆ ಜೋಡಿಸಿಕೊಂಡು ಸ್ಥಳೀಯ ಉದ್ಯೋಗ ಖಾತರಿ ಕಾರ್ಮಿಕರ ಸಹಕಾರದೊಂದಿಗೆ ಭವನ ನಿರ್ಮಾಣಕ್ಕೆ ನಿರ್ಣಯಿಸಿ, ಉದ್ಯೋಗ ಚೀಟಿ ಇಲ್ಲದ ಆರ್ಹರಿಗೆ ಪಂಚಾಯಿತಿ ಮೂಲಕ ಕೂಡಲೇ ಉದ್ಯೋಗ ಚೀಟಿ ಮಾಡಿಸಿಕೊಳ್ಳಲು ತಿಳಿಸಲಾಯಿತು. ಕಾಲೋನಿಯಲ್ಲಿ ಯಾವ ಮಗುವು ಕೂಡಾ ಶಿಕ್ಷಣದಿಂದ ವಂಚಿತವಾಗಬಾರದು, ಆ ಹಿನ್ನೆಲೆಯಲ್ಲಿ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ಮಕ್ಕಳೂ ಕೂಡಾ ಮರಳಿ ಶಾಲೆಗೆ ಹೋಗುವಂತೆ ಪ್ರೇರೆಪಿಸಬೇಕು ಎಂದು ತಹಶೀಲ್ದಾರ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಮೀನುಗಾರಿಕಾ ಇಲಾಖೆಯ ಮೇಲ್ವಿಚಾರಕ ವಿಶ್ವನಾಥಯ್ಯ, ಪಶು ಸಂಗೋಪನ ಇಲಾಖೆಯ ಡಾ.ಸೂರ್ಯನಾರಾಯಣ ಉಪಾದ್ಯ, ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಶೆಟ್ಟಿ, ಶರತ್ ಕುಮಾರ್ ಹೆಗ್ಡೆ, ಗ್ರಾಮ ಲೆಕ್ಕಾಧಿಕಾರಿ ದಿನೇಶ, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಆರಕ್ಷಕ ಇಲಾಖೆಯ ಸುರೇಶ, ಕೊರಗ ಸಮುದಾಯದ ಮುಖಂಡರಾದ ಗಣೇಶ್ ಕುಂಭಾಶಿ, ಗಣೇಶ ಬಾರಕೂರು ಉಪಸ್ಥಿತರಿದ್ದರು.