ಯಡಾಡಿ – ಮತ್ಯಾಡಿ :ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಸ್ಥೆಯ ಲಿಟ್ಲ್‌ ಸ್ಟಾರ್ ಸ್ಕೂಲ್ ನ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ

0
216

ದೇಶದ ಭವಿಷ್ಯ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದೆ- ವಿಧುಶೇಖರ ಭಾರತಿ ಸ್ವಾಮೀಜಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾವು ನೀಡುವ ಶಿಕ್ಷಣದಿಂದ ಮಕ್ಕಳ ಭವಿಷ್ಯ ನಿರ್ಧಾರವಾಗುತ್ತದೆ. ವಿದ್ಯಾವಂತರು ಯಾವತ್ತೂ ವಿನಯಶಾಲಿಗಳಾಗಿರುತ್ತಾರೆ. ಇಂದಿನ ಸುಶಿಕ್ಷಿತ ಶಿಕ್ಷಕರನ್ನು ಹೊಂದಿರುವ ವಿದ್ಯಾಸಂಸ್ಥೆಗಳು ದೇಶದ ಭವಿಷ್ಯವನ್ನು ತೀರ್ಮಾನಿಸುತ್ತವೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿಯವರು ಹೇಳಿದರು

ಅವರು ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಸ್ಥೆಯ ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

Click Here

ಶಿಕ್ಷಣವೆಂದರೆ ಕೇವಲ ಪಠ್ಯ ಶಿಕ್ಷಣವಲ್ಲ. ನಮ್ಮ ಸಂಸ್ಕೃತಿಯಲ್ಲಿ ನಾವು ಅತ್ಯಂತ ಶ್ರದ್ಧಾಳುಗಳಾಗಿರಬೇಕು. ತಂದೆ ತಾಯಿ ಗುರು ಹಿರಿಯರಲ್ಲಿ ಶ್ರದ್ಧೆಯಿಟ್ಟು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರವಂತರಾದಾಗ ಬದುಕು ಸಾರ್ಥಕವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು. ಮೊಬೈಲ್ ಅಭ್ಯಾಸವನ್ನು ಕಡಿಮೆ ಮಾಡಿ ಓದಿನ ಕಡೆಗೆ ಹೆಚ್ಚು ಗಮನ ಕೊಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸ್ಪರ್ಧಾತ್ಮಕ ದಿನದಲ್ಲಿ ಪೋಷಕರಿಗೆ ಆಂಗ್ಲ ಮಾಧ್ಯಮ ಅನಿವಾರ್ಯ ಎಂಬಂತಾಗಿದೆ. ಶಾಲೆಯೇ ಶಾರದೆಯ ದೇಗುಲ. ಆ ನಿಟ್ಟಿನಲ್ಲಿ ಸರ್ಕಾರ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ಕೊಡಬೇಕಾಗಿದೆ. ಶಿಕ್ಷಣವನ್ನು ಶಿಕ್ಷಕರಿಂದ ಕಲಿತರೆ ಸಂಸ್ಕಾರವನ್ನು ಪೋಷಕರಿಂದ ಕಲಿಯಬೇಕು. ಮಕ್ಕಳು ಶಿಕ್ಷಣದ ಜೊತೆಗೆ ಲಲಿತಕಲೆಗಳನ್ನು ಅಭ್ಯಾಸ ಮಾಡಬೇಕು. ಆ ಮೂಲಕ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಿಕೊಂಡು ಕಷ್ಟದ ದಿನಗಳನ್ನು ಎದುರಿಸುವ ಶಕ್ತಿ ತುಂಬಿಕೊಳ್ಳಬೇಕು. ಅದಕ್ಕಾಗಿ ಶಿಕ್ಷಕರು ಮತ್ತು ಪೋಷಕರು ಶ್ರಮವಹಿಸಬೇಕಿದೆ ಎಂದರು.

ಬಸ್ರೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಮಾಜಿ ಶಾಸಕ ಅಪ್ಪಣೆ ಹೆಗ್ಡೆ ಮಾತನಾಡಿ, ಸಮಾಜಕ್ಕೆ ಹಿತಕರವಾದ ಉತ್ತಮ ನಾಗರಿಕರಾಗುವ ವಿದ್ಯೆ ಅತ್ಯಗತ್ಯ. ವಿದ್ಯೆ ನಮ್ಮ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಗೆ ಪೂರಕವಾಗಬೇಕು ಎಂದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ರಮೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಜಿ ಭರತ್ ಶೆಟ್ಟಿ, ಸೌಕೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಮಂಜಯ್ಯ ಶೆಟ್ಟಿ, ಮಹೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here