ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ (ರಿ), ಬೆಂಗಳೂರು ಇದರ ಉಡುಪಿ ಜಿಲ್ಲಾ ಹಾಗೂ ಕುಂದಾಪುರ ತಾಲೂಕು ಘಟಕದ ವತಿಯಿಂದ ಹೊಸ ಪಿಂಚಣಿ ಯೋಜನೆಯನ್ನು ಎನ್.ಪಿ.ಎಸ್. ಹಿಂಪಡೆದು ಈ ಹಿಂದಿನಂತೆ ಹಳೆ ಪಿಂಚಣಿ ಯೋಜನೆಯನ್ನು ಒಪಿಎಸ್ ಮರು ಅನುಷ್ಠಾನ ಮಾಡಲು ಶಿಫಾರಸ್ಸು ಮಾಡುವಂತೆ ಬೆಂಬಲ ಕೋರಿ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಕುಂದಾಪುರ ತಾಲೂಕು ಸರ್ಕಾರೀ ಹೊಸ ಪಿಂಚಣಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, 2010ರಿಂದ ನಮ್ಮ ಹೋರಾಟ ಶಾಂತಿಯುತವಾಗಿ ನಡೆಯುತ್ತಾ ಬಂದಿದೆ. ಬೆಂಗಳೂರಿನಲ್ಲಿ 15 ದಿನಗಳ ಕಾಲ ಮಾಡು ಇಲ್ಲವೇ ಮಡಿ ಎನ್ನುವ ಹೋರಾಟ ನಡೆದಿದೆ. ರಾಜ್ಯದ 2 ಲಕ್ಷಕ್ಕೂ ಹೆಚ್ಚಿನ ಸರ್ಕಾರೀ ನೌಕರರಿಗೆ ನಿಶ್ಚಿತ ಪಿಂಚಣಿ ಇಲ್ಲದೇ ಅತಂತ್ರವಾಗಿದ್ದು, ನಮ್ಮ ಸಂಧ್ಯಾಕಾಲದಲ್ಲಿ ಜೀವನ ಭದ್ರತೆಯ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಹೊಸ ಪಿಂಚಣಿ ಯೋಜನೆಯಲ್ಲಿ, ನೌಕರರ ಪ್ರತಿ ತಿಂಗಳ ಸಂಬಳದಲ್ಲಿ ಶೇ. 10 ರಷ್ಟು ಕಟಾವಣೆ ಮಾಡಿ, ಸರ್ಕಾರ ಶೇ.14 ಹಣವನ್ನು ಸೇರಿಸಿ ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸಲಾಗುತ್ತಿದೆ. ಇದು ಅವೈಜ್ಞಾನಿಕ ಹಾಗೂ ಮಾರಕ ಪದ್ದತಿಯಾಗಿದ್ದು, ನಿವೃತ್ತಿ ನಂತರದಲ್ಲಿ ಲಭಿಸುವ ಅಲ್ಪ ಮೊತ್ತದ ಹಣದಿಂದಾಗಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಸರ್ಕಾರ ಈಗಾಗಲೇ ಒಪ್ಪಿಕೊಂಡಂತೆ ಆರನೇ ಗ್ಯಾರಂಟಿಯಾಗಿ ಎನ್.ಪಿ.ಎಸ್. ತೆಗೆದು ಒಪಿಎಸ್ ಅಳವಡಿಸಬೇಕು. ಅಲ್ಲಿಯ ವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಶಿಕ್ಷಕಿ ಚೈತ್ರ ಬಿ ಶೆಟ್ಟಿ ಆಗ್ರಹಿಸಿದರು.
ಸರ್ಕಾರ ಈಗಾಗಲೇ ತನ್ನ ಪ್ರಣಾಳಿಕೆಯಲ್ಲಿ ಎನ್.ಪಿ.ಎಸ್. ಬದಲು ಒಪಿಎಸ್ ಅಳವಡಿಸುವ ಭರವಸೆ ನೀಡಿದೆ. ಆದರೆ ಅದರ ಅನುಷ್ಠಾನವಾಗಿಲ್ಲ. ತಕ್ಷಣ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಗಣೇಶ್ ಶೆಟ್ಟಿ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ, ಕುಂದಾಪುರ ಘಟಕದ ಉಪಾಧ್ಯಕ್ಷೆ ಸುನೀತಾ, ರಾಘವೇಂದ್ರ ಎಂ, ಖಜಾಂಜಿ ಗುರುಮೂರ್ತಿ, ಕುಂದಾಪುರ ತಾಲೂಕು ಆಸ್ಪತ್ರೆ ಶುಶ್ರುಷಾಧಿಕಾರಿ ಭಾರತಿ, ಪಲ್ಲವಿ, ಸಂಧ್ಯಾ ಶೆಟ್ಟಿ, ರಾಜೀವ ಶೆಟ್ಟಿ ಕಳಿ, ಹಾಗೂ ಇತರ ಎಂ ಪಿ ಎಸ್ ನೌಕರರ ಪದಾಧಿಕಾರಿಗಳು ಹಾಜರಿದ್ದರು.