ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಕೆನರಾ ಬ್ಯಾಂಕಿನ ಮ್ಯಾನೇಜರ್ ಚಲಾಯಿಸುತ್ತಿದ್ದ ಬೈಕಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ನವಿ ಮುಂಬೈ ನಿವಾಸಿ ರಾಹುಲ್ ಬಾಲಕೃಷ್ಣ ರಂಕಂಬೆ ಎಂಬುವರೇ ಅಪಘಾತದಲ್ಲಿ ಸಾವನ್ನಪ್ಪಿದವರು. ರಾಹುಲ್ ಬಾಲಕೃಷ್ಣ ಅವರು ಮರವಂತೆಯ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಶನಿವಾರ ಸಂಜೆ ಮರವಂತೆಯ ಬ್ಯಾಂಕಿನಲ್ಲಿ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ಕುಂದಾಪುರದ ವಾಸದ ಮನೆ ಕಡೆಗೆ ಬರುತ್ತಿದ್ದರು. ಈ ಸಂದರ್ಭ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿ ಗಂಭೀರ ಗಾಯಗೊಂಡ ರಾಹುಲ್ ಅವರನ್ನು ಗಂಗೊಳ್ಳಿಯ 24*7 ಆಪದ್ಬಾಂಧವ ಅಂಬುಲೆನ್ಸ್ ನ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡ ತಕ್ಷಣ ಕುಂದಾಪುರದ ಆಸ್ಪತ್ರೆಗೆ ಸಾಗಿಸಿದೆ ಆದರೆ ದಾರಿ ಮಧ್ಯೆ ರಾಹುಲ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಅಪಘಾತ ನಡೆಸಿದ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಲಾರಿಯನ್ನು ಬೆನ್ನಟ್ಟಿದ್ದಾರೆ. ಚಾಲಕ ಲಾರಿಯನ್ನು ಹೆಮ್ಮಾಡಿ ಪೇಟೆಯೊಳಗೆ ನುಗ್ಗಿಸಿ ಪುನಃ ಬೈಂದೂರು ಕಡೆಗೆ ಸಾಗುವ ರಸ್ತೆಯಲ್ಲಿ ಸಾಗಿ ಮುಳ್ಳಿಕಟ್ಟೆ ಡಿವೈಡರ್ ಒಳಗೆ ರಾಂಗ್ ಸೈಡ್‌ನಲ್ಲಿ ನುಗ್ಗಿಸಿ ಪರಾರಿಯಾಗಲು ಯತ್ನಿಸಿದ ಸಂದರ್ಭ ನಿಯಂತ್ರಣ ಕಳೆದುಕೊಂಡ ಲಾರಿ ರಾಷ್ಟ್ರೀಯ ಹೆದ್ದಾರಿ ಚರಂಡಿಯೊಳಗೆ ಸಿಲುಕಿಕೊಂಡಿದೆ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ರಾಹುಲ್ ಗೆ ಐದು ತಿಂಗಳ ಹಿಂದೆ ವಿವಾಹವಾಗಿತ್ತು. ಮದುವೆ ಸಂದರ್ಭದಲ್ಲಿ ಖರೀದಿಸಿದ್ದನ್ನನಾದ ಬೈಕಿನಲ್ಲಿ ಅವರು ತಮ್ಮ ಮನೆಗೆ ವಾಪಸಾಗುತ್ತಿದ್ದರು. ಗಂಗೊಳ್ಳಿ ಠಾಣೆ ಎಸ್‌ಐ ಹರೀಶ್ ಮತ್ತು ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು.