ಬೆಳ್ವೆ ಗುಮ್ಮಹೊಲ ಚರ್ಚ್ ಫಾದರ್ ಬದಲಾವಣೆಗೆ ಆಗ್ರಹ: ನ್ಯಾಯ ಸಿಗದಿದ್ದರೆ ಕ್ರೈಸ್ತ ಧರ್ಮ ತೊರೆಯುವ ಎಚ್ಚರಿಕೆ..!

0
913

ಕುಂದಾಪುರ ಮಿರರ್ ಸುದ್ದಿ…
ಉಡುಪಿ:
ಉಡುಪಿ ಜಿಲ್ಲೆಯ ಬೆಳ್ವೆ ಗುಮ್ಮಹೊಲ ಎಂಬಲ್ಲಿನ ಸಂತ ಜೋಸೆಫರ ಚರ್ಚ್ ಧರ್ಮಗುರುಗಳು ಭಕ್ತಾದಿಗಳಿಗೆ ಅವಹೇಳನ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಭಾನುವಾರ ಚರ್ಚ್ ಎದುರು ಭಕ್ತರು‌ ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದು ವಾರದೊಳಗೆ ಧರ್ಮಗುರುಗಳ ಬದಲಾವಣೆ ಮಾಡದಿದ್ದಲ್ಲಿ ಪ್ರತಿಭಟನೆ ಜೊತೆಗೆ ಕ್ರೈಸ್ತ ಧರ್ಮ ತ್ಯಜಿಸುವ ಎಚ್ಚರಿಕೆ ನೀಡಿದ್ದಾರೆ.


ಸುಮಾರು 60 ವರ್ಷಗಳ ಇತಿಹಾಸವಿರುವ ಉಡುಪಿ ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲದ ಸಂತ ಜೋಸೆಫರ ಚರ್ಚ್‌ಗೆ ಕಳೆದ 3 ತಿಂಗಳ ಹಿಂದೆ ಗುರುಗಳಾಗಿ ಬಂದ ಅಲೆಕ್ಸಾಂಡರ್‌ ಲೂವಿಸ್ ಅವರು ಭಕ್ತಾದಿಗಳಿಗೆ ಅವಹೇಳನ ಮಾಡಿದ್ದಲ್ಲದೆ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.ಅಲ್ಲದೆ ಅಧಿಕಾರ ದುರುಪಯೋಗಪಡಿಸಿಕೊಂಡು ಐಷಾರಾಮಿ ಜೀವನಕ್ಕಾಗಿ ಭಕ್ತರ ಮನಸ್ಸಿಗೆ ಘಾಸಿ ಮಾಡಿದ್ದಾರೆ ಎಂದು ಭಕ್ತರ ಪರವಾಗಿ ಗ್ರಾಮಸ್ಥ ಪ್ರವೀಣ್ ಲೋಬೋ ಆಕ್ರೋಷ ವ್ಯಕ್ತಪಡಿಸಿದರು.

ಭಕ್ತರು ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅವರಿಗೂ ಮನವು ಸಲ್ಲಿಸಲಾಗಿದೆ. ಆದರೆ ಧರ್ಮಪ್ರಾಂತ್ಯದ ಆಡಳಿತ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಫಾದರ್ ಪರವಾಗಿಯೇ ಇದ್ದಾರೆ ಎಂದು ಕೂಡ ಗಂಭೀರ ಆರೋಪ ಮಾಡಲಾಗಿದೆ.

ಗುರುಗಳನ್ನು ವರ್ಗಾವಣೆ ಮಾಡಲು 1 ವಾರದ ಗಡುವು ನೀಡಿದ ಭಕ್ತರು..
ಭಕ್ತರಿಗೆ ಬೇಡವಾದ ಗುಮ್ಮಹೊಲ ಚರ್ಚ್ ಗುರುಗಳ ಬಗ್ಗೆ ನಿಯೋಗವೊಂದು ಬಿಷಪ್ ಅವರನ್ನು ಖುದ್ದು ಭೇಟಿಯಾಗಿ ಮನವರಿಕೆ ಮಾಡಿದರೂ ಬಿಷಪ್ ಅವರು ಕೂಡ ಮೃದುದೋರಣೆ ತೋರುತ್ತಿರುವುದು ಸಹಜವಾಗಿಯೇ ಚರ್ಚ್ ನಂಬಿಕೊಂಡು ಬಂದ 32 ಕುಟುಂಬಗಳ ಕ್ರೈಸ್ತ ಸಮುದಾಯದವರನ್ನು ನೋಯಿಸಿದೆ. ಗುಮ್ಮಹೊಲದ ಚರ್ಚ್ ಗುರುಗಳನ್ನು ಒಂದು ವಾರದೊಳಗೆ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಬಿಷಪ್ ಕಚೇರಿಯೆದುರು ಅನಿರ್ಧಿಷ್ಟಾವಧಿ ಧರಣಿ ಮಾಡಲಾಗುತ್ತದೆ ಎಂದು ಭಾನುವಾರ ಚರ್ಚ್ ಎದುರು ನಡೆಸಿದ ಖಂಡನಾ ಸಭೆಯಲ್ಲಿ ಒಕ್ಕೋರಲ ಅಭಿಪ್ರಾಯ ಕೇಳಿಬಂತು. ಅಲ್ಲದೆ ಗ್ರಾಮಪಂಚಾಯತಿಗೆ ಮನವಿ ಸಲ್ಲಿಸಲಾಯಿತು.

Click Here

Click Here

ಭಾನುವಾರವಾದರೂ ಚರ್ಚ್ ಗೇಟಿಗೆ ಬೀಗ…
ಕ್ರೈಸ್ತ ಸಮುದಾಯದವರು ಭಾನುವಾರ ಸಾಮೂಹಿಕ ಪ್ರಾರ್ಥನೆ ಮಾಡುವುದು ಸಂಪ್ರದಾಯ. ಆದರೆ ಇಂದು
ಪ್ರಾರ್ಥನೆಗೆ ಭಕ್ತರು ಬಾರದಂತೆ ಚರ್ಚ್ ಗೇಟಿಗೆ ಬೀಗ ಹಾಕಲಾಗಿದ್ದು ಭಕ್ತರು ಇದರಿಂದ ನೊಂದುಕೊಂಡರು. ಚರ್ಚ್ ಯಾರ ಆಸ್ತಿ ಅಲ್ಲ, ಚರ್ಚ್ ನಿರ್ಮಾಣಕ್ಕೆ ಎಲ್ಲರೂ ಶ್ರಮಪಟ್ಟಿದ್ದೇವೆ ಎಂದು ಮಹಿಳಾ ಭಕ್ತೆ ಆಕ್ರೋಷ ವ್ಯಕ್ತಪಡಿಸಿದರು. ಅವರು ಧರ್ಮಗುರುಗಳಾಗಿ ಬಂದ ಮೇಲೆ ಚರ್ಚ್ ಪ್ರಾರ್ಥನೆಗೂ ಅವಕಾಶ ಸಿಗಲಿಲ್ಲ‌ ಎಂದು ಭಕ್ತರು ಅಸಮಾಧಾನ ಹೊರಹಾಕಿದ್ದಾರೆ.

ಕ್ರೈಸ್ತ ಸಮುದಾಯದ ಪರ ನಿಂತ ಇತರ ಸಮುದಾಯದ ಗ್ರಾಮಸ್ಥರು
ಭಾನುವಾರ ನಡೆದ ಖಂಡನಾ‌ಸಭೆ ವೇಳೆ ಕ್ರೈಸ್ತಧರ್ಮದ ಭಕ್ತರ ಪರವಾಗಿ ಧರ್ಮಾತೀತವಾಗಿ ಇತರ ಸಮುದಾಯದವರು ಭಾಗವಹಿಸಿ ಅವರಲ್ಲಿ ವಿಶ್ವಾಸ ತುಂಬಿದರು. ನಾವು ಬೆಳ್ವೆ ಭಾಗದಲ್ಲಿ ಸರ್ವಧರ್ಮ ಸಮನ್ವಯತೆ ತತ್ವದಡಿ ಯಾವುದೇ ಜಾತಿ ಧರ್ಮಗಳಿಲ್ಲದೆ ಬದುಕುತ್ತಿದ್ದೇವೆ. ಈಗ ಶೃದ್ಧಾಕೇಂದ್ರದಲ್ಲಿ ನಮ್ಮ ಗ್ರಾಮದ ಭಕ್ತರಿಗೆ ಸಮಸ್ಯೆಯಾದರೆ ಯಾವುದೇ ಕಾರಣಕ್ಕೂ‌ ಸುಮ್ಮನಿರುವುದಿಲ್ಲ. ಸಮುದಾಯದ ಪರವಾಗಿ ನಿಲ್ಲುತ್ತೇವೆ ಎಂದು ನೊಂದ ಕ್ರೈಸ್ತ ಸಮುದಾಯದ ಪರ ಬೆಳ್ವೆ ಗ್ರಾ.ಪಂ‌ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಮಾಜಿ ಅಧ್ಯಕ್ಷರಾದ ವೈ. ಕರುಣಾಕರ ಶೆಟ್ಟಿ, ಉದಯ ಪೂಜಾರಿ ಆಗ್ರಹಿಸಿದರು.

ಭಕ್ತಾದಿಗಳ ಪರವಾಗಿ ಶಾಂತಿ ಡೇಸಾ, ಸಿಲ್ವಿಯಾ ಪ್ಲೊರೆಸ್, ಸ್ಯಾಂಡ್ರಾ ಸ್ಯಾಮ್ಸನ್, ಪ್ರೇಮ್ ಪ್ಲೊರೆಸ್ ಮೊದಲಾದವರು ಮಾತನಾಡಿದರು.

Click Here

LEAVE A REPLY

Please enter your comment!
Please enter your name here