ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಅಂಪಾರು ಗ್ರಾಮೀಣ ಪ್ರದೇಶದಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿದ ಶ್ರೀ ರಾಮ ಕ್ಯಾಶೂಸ್, ಗೇರು ಬೀಜ ಕಾರ್ಖಾನೆಗೆ ಶ್ರೀಮದ್ ವಿದ್ಯಾಧೀಶ ತೀರ್ಥ ವಡೆಯರ್ ಸ್ವಾಮೀಜಿಯವರು ಬಸ್ರೂರು ಶಾಖಾ ಮಠದ ಮೊಕ್ಕಾಂನಿಂದ ಆಗಮಿಸಿ ಆಶಿರ್ವಚನ ಮಾಡಿದರು. ಸಂಸ್ಥೆಯ ನಾಲ್ವರು ಪಾಲುದಾರರಾದ ಕಂಚಾರು ಧನಂಜಯ ಪ್ರಭು ಹಾಗೂ ರಾಘವೇಂದ್ರ ಪ್ರಭು ಸಹೋದರರು ಮತ್ತು ಉಪ್ಪುಂದ ಸತೀಶ್ ಪೈ ಹಾಗೂ ರಾಜೇಶ್ ಪೈ ಸಹೋದರರ ಮನವಿಯನ್ನು ಮನ್ನಿಸಿ ಪರಮಪೂಜ್ಯ ಗುರುವರ್ಯರು ಆಗಮಿಸಿದರು. ಪೂರ್ಣ ಕುಂಭ ಸ್ವಾಗತದೊಂದಿಗೆ ಗುರುವರ್ಯರನ್ನು ಬರಮಾಡಿಕೊಳ್ಳಲಾಯಿತು. ಫ್ಯಾಕ್ಟ್ರೀ ಆವರಣದಲ್ಲಿದ್ದ ಶ್ರೀ ನಾಗ,ನಾಗಯಕ್ಷಿ ಹಾಗೂ ಚಾಮುಂಡಿ ಗುಡಿಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಾರ್ಖಾನೆ ವ್ಯವಹಾರ, ಗೇರು ಬೀಜ ಗೋದಾಮು, ಕಟ್ಟಿಂಗ್ ಮುಂತಾದ ಎಲ್ಲಾ ವಿಭಾಗಗಳನ್ನು ಸ್ವತಃ ವೀಕ್ಷಿಸಿ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಚಾರು ಪ್ರಭು ಕುಟುಂಬದ ಹಿರಿಯ ದೇವದಾಸ್ ಪ್ರಭು ದಂಪತಿ ಹಾಗೂ ಉಪ್ಪುಂದ ಪೈ ಕುಟುಂಬದ ಹಿರಿಯ ಸಹೋದರ ಉಮೇಶ್ ಪೈ ದಂಪತಿಗಳು ಗುರುವರ್ಯರಿಗೆ ಪಾದಪೂಜೆ ಮಾಡಿದರು. ಸಂಸ್ಥೆಯ ಗ್ರಾಹಕರು, ಕೆಲಸಗಾರರು, ಎರಡೂ ಕುಟುಂಬಗಳ ಬಂಧುಗಳು ಊರಿನ ಆಹ್ವಾನಿತರು ಸುಮಾರು ಇನ್ನೂರಕ್ಕೂ ಹೆಚ್ಚು ಭಕ್ತರು ಗುರುವರ್ಯರ ಕೃಪೆಗೆ ಪಾತ್ರರಾದರು. ಶ್ರೀಮದ್ ವಿದ್ಯಾಧೀಶ ತೀರ್ಥರು ತಮ್ಮ ಆಶೀರ್ವಚನ ಮಾತುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶ್ರೀ ರಾಮ ಕ್ಯಾಶೂಸ್ ನ 13 ವರ್ಷಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಲ್ಕು ಜನ ಪಾಲುದಾರರು ಐಕ್ಯಮತದಲ್ಲಿ ಕೆಲಸ ಮಾಡಿ ಯಶಸ್ಸು ಸಾಧಿಸಲಿ ಎಂದು ಹರಸಿದರು. ಆಗಮಿಸಿದ ಸರ್ವರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಶಿಕ್ಷಕ ಶ್ರೀ ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು, ಸಿದ್ದಾಪುರ ಪಾಂಡುರಂಗ ಪೈ ಸ್ವಾಗತಿಸಿದರು.