ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಪರಿಗಣಿಸಿ ಉಡುಪಿ ಚಿಕ್ಕಮಗಳುರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಜಯಭೇರಿ ಭಾರಿಸಲಿದೆ ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶುಕ್ರವಾರ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕುಂದಾಪುರ ಮಂಡಲದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಮಹಾಶಕ್ತಿ, ಶಕ್ತಿ ಕೇಂದ್ರ, ನಗರಸಭೆ, ಪುರಸಭೆಗಳ ವಾರ್ಡ್ಗಳು ಸೇರಿದಂತೆ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿದ್ದು, ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಉತ್ಸಾಹ ಕಂಡಾಗ ಈ ಬಾರಿ ದಾಖಲೆಯ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಮೂಡಿದೆ. ಅದೇ ರೀತಿ ಕುಂದಾಪುರ ಮಂಡಲದ ನಾಯಕರು, ಪದಾಧಿಕಾರಿಗಳು ಕಾರ್ಯಕರ್ತರ ಪರಿಶ್ರಮ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟರ ಸಹಕಾರದಿಂದ ಭಾರೀ ಮತಗಳ ಮುನ್ನಡೆ ಸಿಗುವ ವಿಶ್ವಾಸವಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷದ ಬೆಳವಣಿಗೆಗೆ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಬಿಜೆಪಿ ಶಾಸಕರಿದ್ದು, ಪೂಜಾರಿಯವರ ಗೆಲುವು ಸುಲಭವಾಗಲಿದೆ ಎಂದರು.
ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ ಮಾತನಾಡಿದರು.
ಇದೇ ಸಮದರ್ಭ ಕುಂದಾಪುರ ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಸುರೇಶ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್. ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಪ್ರಮುಖರಾದ ರಾಜೇಶ್ ಕಾವೇರಿ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಾಡೂರು ಸುರೇಶ್ ಶೆಟ್ಟಿ, ಕಿರಣ ಪೂಜಾರಿ ತೆಕ್ಕಟ್ಟೆ, ಸುರೇಂದ್ರ ಕಾಂಚನ್, ಜಯಶೀಲ ಶೆಟ್ಟಿ, ಪ್ರವೀಣ್ ವಕ್ವಾಡಿ, ಸಂಧ್ಯಾ ರಮೇಶ್, ನಯನ ಗಣೇಶ, ವಿಠಲ ಪೂಜಾರಿ ಕೋಟ, ಅನಿತಾ ಶ್ರೀಧರ, ಮಂಜುನಾಥ ಬಳ್ಕೂರು, ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮತ್ತಿತರರು, ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ ಪ್ರಸ್ತಾವಿಸಿದರು.