ಕುಂದಾಪುರ ಮಿರರ್ ಸುದ್ದಿ…
ನಾಗೂರು: ಭಾರತವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಚುನಾವಣೆ ಇದಾಗಿದೆ. ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿಯವರಿಗೆ ಪಟ್ಟಾಭಿಷೇಕ ಮಾಡಬೇಕು ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ನಾಗೂರಿನ ಲಲಿತಾಕೃಷ್ಣ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ಕೊಲ್ಲೂರು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ತಾಯಿ ಮೂಕಾಂಬಿಕೆ ಮೋದಿ ಜೀಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವಂತೆ ಬೇಡಿಕೊಂಡಿದ್ದೇವೆ. ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಇದು ಭಾರತವನ್ನು ವಿಶ್ವಗುರುವಾಗಿ ಬೆಳಯಲು ಮೇಲ್ತಂಕಿ ಹಾಕಿದ ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಚುನಾವಣೆಯಾಗಿದೆ ಎಂದರು.
ದೇಶ, ಕರ್ನಾಟಕ, ಕ್ಷೇತ್ರದ ರೈತರು, ಬಡವರು, ಮಹಿಳೆಯರು ಸಹಿತ ಎಲ್ಲರೂ ಸ್ವಾಭಿಮಾನದಿಂದ ಬದುಕಬೇಕಾದರೆ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ 60 ವರ್ಷಕ್ಕೂ ಹೆಚ್ಚು ಕಾಲ ಈ ದೇಶವನ್ನು ಆಳಿದ್ದರೂ ಬಡವರನ್ನು ಅಭಿವೃದ್ಧಿ ಮಾಡಿಲ್ಲ. ಬಡವರು ಬಡವರಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ಅದೆಷ್ಟೋ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ದೇಶ, ರಾಜ್ಯ, ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ವಿವಿಧ ವಿಶ್ವವಿದ್ಯಾಲಯು, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಅನೇಕ ಕೊಡುಗೆಯನ್ನು ಶಿವಮೊಗ್ಗ ಕ್ಷೇತ್ರಕ್ಕೂ ನೀಡಿದ್ದಾರೆ ಎಂದರು.
ಸದಾ ನಿಮ್ಮ ಸೇವೆಯಲ್ಲಿ
ಕಳೆದ ಚುನಾವಣೆಯಲ್ಲಿ ಅತ್ಯಧಿಕ ಮತ ನೀಡಿದ್ದೀರಿ. ಈ ಬಾರಿಯೂ ಅದಕ್ಕಿಂತ ಹೆಚ್ಚು ಮತ ನೀಡುವ ವಿಶ್ವಾಸವೂ ಇದೆ. ಜೀವನ ಪೂರ್ತಿ ನಿಮ್ಮ ಸೇವೆ ಮಾಡಿದರೂ ಋಣ ತೀರಿಸಲು ಸಾಧ್ಯವಿಲ್ಲ. ಮತದಾರರ ಮೌಲ್ಯವನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯದಲ್ಲಿ ಮುನ್ನೆಡೆಯುತ್ತೇವೆ.
ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುವ ಅಪಸ್ವರ ಭಾರದಂತೆ ನಡೆದುಕೊಳ್ಳುತ್ತೇವೆ. ಸದಾ ನಿಮ್ಮ ಸೇವೆಯಲ್ಲಿರುತ್ತೇವೆ ಎಂದರು.
ಜನರ ಬದುಕು ಕಸಿದ ಕಾಂಗ್ರೆಸ್
ಕಾಂಗ್ರೆಸ್ ಸರಕಾರ ಜನರ ಬದುಕಿಗೆ ಮಾರಕವಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ 5 ರೂ. ಪ್ರೋತ್ಸಾಹಧನ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ರೈತರು ಬರಗಾಲ ಎದುರಿಸುತ್ತಿದ್ದರೂ ಕಳೆದ 6 ತಿಂಗಳಿಂದ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. 650 ಕೋ.ರೂ. ನೀಡಲು ಬಾಕಿಯಿದೆ. ಪ್ರಧಾನ ನರೇಂದ್ರ ಮೋದಿಯವರು ಕೃಷಿ ಸಮ್ಮಾನ ಅಡಿಯಲ್ಲಿ ವಾರ್ಷಿಕ 6 ಸಾವಿರ ರೂ.ಗಳನ್ನು ರೈತರಿಗೆ ನೀಡುತ್ತಿದ್ದು, ಅದಕ್ಕೆ ಬಿ.ಎಸ್.ಯಡಿಯೂಪ್ಪ ಅವರು ಸಿಎಂ ಆಗಿದ್ದಾಗ 4 ಸಾವಿರ ಸೇರಿಸಿ ಕೊಡುತ್ತಿದ್ದರು. ಅದನ್ನು ಈಗ ಕಾಂಗ್ರೆಸ್ ಸರಕಾರ ನಿಲ್ಲಿಸಿಬಿಟ್ಟಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಸರಕಾರ ಜನರ ಬದುಕಿಗೆ ಮಾರಕವಾಗಿದೆ ಎಂದರು.
298 ಕೋಟಿ ರೂ. ಕಾಮಗಾರಿ
ಶಿವಮೊಗ್ಗ ಕ್ಷೇತ್ರದ ಕಂಬದಕೋಣೆ ಜಿ.ಪಂ. ವ್ಯಾಪ್ತಿಯಲ್ಲಿ ಸುಮಾರು 298 ಕೋ.ರೂ. ಕಾಮಗಾರಿಯಾಗಿದೆ. ಗ್ರಾಮೀಣ ರಸ್ತೆಗೆ 40 ಕೋ.ರೂ., ಕಿಂಡಿ ಅಣೆಕಟ್ಟಿಗೆ 11 ಕೋ.ರೂ., ಬಂದರಿಗೆ 212 ಕೋ.ರೂ., ಶಾಲಾ ಕಾಲೇಜು ಅಭಿವೃದ್ಧಿಗೆ 2.78 ಕೋ.ರೂ., ಕೆರೆ ಅಭಿವೃದ್ಧಿಗೆ 1.10 ಕೋ.ರೂ., ನದಿ ದಂಡೆ ಸಂಕ್ಷಣೆಗೆ 5.72 ಕೋ.ರೂ ನೀಡಲಾಗಿದೆ. ವಿವಿಧ ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ 25 ಕೋ.ರೂ. ಒದಗಿಸಲಾಗಿದೆ. ಹೀಗೆ ಮುಂದೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.
ಶಾಸಕರಾದ ಗುರುರಾಜ ಗಂಟಿಹೊಳೆ, ಮಂಡಲ ಅಧ್ಯಕ್ಷರಾದ ದೀಪಾಕ್ ಕುಮಾರ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಶೇಖರ್ ಖಾರ್ವಿ ಸಹಿತವಾಗಿ ಪಕ್ಷದ ಕಾರ್ಯಕರ್ತರು ಮುಖಂಡರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.