ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ: ನನ್ನ ಬಗ್ಗೆ ವಿರೋಧ ಪಕ್ಷದವರು ತೀರಾ ಖಾಸಗೀ ವಿಚಾರಗಳನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದೆಲ್ಲವೂ ಸುಳ್ಳು. ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೇ ಈ ಬಾರಿ ನನಗೆ ಜನ ಮತ ನೀಡುತ್ತಾರೆ. ಆ ಮೂಲಕ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಕೊಡಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.
ಅವರು ಶನಿವಾರ ಸಂಜೆ ಹೆಮ್ಮಾಡಿಯ ಕಟ್ ಬೆಲ್ತೂರು ಪ್ರದೇಶದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಜನರ ಪರವಾಗಿ ನೀಡಿದ ಕೆಲಸಕಾರ್ಯಗಳು ಇಂದು ಜನರ ಮುಂದಿದೆ. ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಆಶ್ರಯ ಹೀಗೆ ಈ ಯೋಜನೆಗಳು ಇಂದಿಗೂ ಜನರ ಮನಸಿನಲ್ಲಿದೆ. ಬಂಗಾರಪ್ಪನವರ ಮಗಳಾಗಿ ನಾನು ಕೂಡಾ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಬೈಂದೂರು ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಜೆಜೆಎಂ, ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಿ ಹೆಚ್ಚಿನ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಮಾಜೀ ಶಾಸಕ ಬಿ.ಎಂ.ಸುಕುಮಾರಗ ಶೆಟ್ಟಿ, ಬಿಜೆಪಿಗೆ ಬೆಳೆಯುವ ನಾಯಕರು ಬೇಡ. ನೆಲದಮೇಲೆ ಕುಳಿತು ಹೇಳಿದ್ದನ್ನು ಮಾಡುವವರು ಬೇಕು. ನನಗೆ, ಹಾಲಾಡಿಯವರಿಗೆ, ರಘುಪತಿ ಭಟ್ರಿಗೆ ಹೀಗೇ ಎಲ್ಲರನ್ನೂ ಹತ್ತಿಕ್ಕಿದ ಬಿಜೆಪಿಗೆ ನಮ್ಮ ಬೆವರು ಹರಿಸಿದ್ದೇ ವ್ಯರ್ಥವಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ವೋಟ್ ಹಾಕಿದ್ರೆ ನಿಮಗೆ ಚೊಂಬೇ ಗತಿ ಎನ್ನುವುದು ನೆನಪಿರಲಿ ಎಂದರು.
ಈ ಸಂದರ್ಭ ಮಾತನಾಡಿದ ನಟ ಶಿವರಾಜ್ ಕುಮಾರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏನು ಮಾಡ್ತಾರೆ ಅಂತ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ನಾನು ನಿಮಗೆ ಭರವಸೆ ಕೊಡುತ್ತೇನೆ. ಗೀತಾ ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತಾಳೆ. ಅದಕ್ಕೆ ನಾನು ಗ್ಯಾರೆಂಟಿ ಎಂದ ಶಿವರಾಜ್ ಕುಮಾರ್, ಈ ಬಾರೊ ಒಂದೇ ಒಂದು ಬಾರಿ ಅವಕಾಶ ಕೊಟ್ಟು ನೋಡಿ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ, ಶರತ್ ಕುಮಾರ ಶೆಟ್ಟಿ ಬಾಳಿಕೆರೆ, ಡಿ.ಆರ್ .ರಾಜು, ಶಂಕರ್ ಪೂಜಾರಿ, ನೇತ್ರಾವತಿ,ಸೈಯ್ಯದ್, ಕೆಪಿಸಿಸಿ ಮಾಧ್ಯಮ ವಕ್ತಾರ ಅನಿಲ್ ಉಪಸ್ಥಿತರಿದ್ದರು