ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಸಂಸದರಾಗಿ ಬಿ.ವೈ. ರಾಘವೇಂದ್ರ ಅವರು ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಗ್ರಾಮೀಣ ರಸ್ತೆ ಅಭಿವೃದ್ಧಿ, ಅಗತ್ಯ ಸೇತುವೆ, ಕಿಂಡಿ ಅಣೆಕಟ್ಟು ಹಾಗೂ ಬಂದರು ನಿರ್ಮಾಣ ಕಾಮಗಾರಿಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ಒದಗಿಸಿದ್ದಾರೆ. ಅವರನ್ನು ಮತ್ತೊಮ್ಮೆ ಬೈಂದೂರು ಕ್ಷೇತ್ರದಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಮೂಲಕ ದಾಖಲೆಯ ಅಂತರದಲ್ಲಿ ಗೆಲ್ಲಿಸುವಂತೆ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಕರೆ ನೀಡಿದರು.
ವಂಡ್ಸೆ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಬಿಜೆಪಿ ಪೇಜ್ ಪ್ರಮುಖರ ಸಭೆಯನ್ನು ವಂಡ್ಸೆ ಸಕಲ ಸಭಾ ಭವನದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ಬಿ.ವೈ. ರಾಘವೇಂದ್ರ ಅವರಿಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆಯಿದೆ. ವಾರಾಹಿ ಯೋಜನೆಯ ಮೂಲಕ ಮನೆ ಮನೆ ಕುಡಿಯುವ ನೀರು ಕಲ್ಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಈ ದೇಶಕ್ಕೆ ಎಷ್ಟು ಅನುಕೂಲವಾಗುವಂತೆ ಸಂಸದರಾಗಿ ಬಿ.ವೈ. ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಸರ್ವಾಂಗೀಣ ಉನ್ನತಿಗೆ ಪೂರಕವಾಗಿದೆ ಎಂದು ಹೇಳಿದರು.
ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಬೂತ್ ಕಡೆಗೆ ಸಮೃದ್ಧ ನಡಿಗೆ ಮೂಲಕ ಕ್ಷೇತ್ರದಲ್ಲಿ ವಿಶೇಷ ಸಂಚಲನ ಮೂಡಿಸಿದ್ದಾರೆ. ಒಂದು ಲಕ್ಷ ಲೀಡ್ ಕೊಡಿಸಲು ಪ್ರತಿ ಬೂತ್ ನಲ್ಲೂ ಸಂಚಾರ ಮಾಡಿದ್ದಾರೆ. ಕ್ಷೇತ್ರವು ಅಭಿವೃದ್ಧಿಯಲ್ಲಿ ಮಾದರಿಯಾಗಬೇಕು ಎನ್ನುವ ನೆಲೆಯಲ್ಲಿ ಬೂತ್ ನಡಿಗೆಯನ್ನು ಯಶಸ್ವಿ ಗೊಳಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪೇಜ್ ಪ್ರಮುಖರು ತಮ್ಮ ವ್ಯಾಪ್ತಿಯ ಮತದಾರರನ್ನು ನಿತ್ಯವೂ ಸಂಪರ್ಕ ಮಾಡಬೇಕು. ಕೇಂದ್ರ ಸರ್ಕಾರದ ಸಾಧನೆ ಹಾಗೂ ಸಂಸದರಾಗಿ ರಾಘವೇಂದ್ರ ಅವರು ಮಾಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಮತದಾರರಿಗೆ ತಿಳಿಸಬೇಕು. ಎಲ್ಲ ಮತಗಳು ಬಿಜೆಪಿಗೆ ಬರುವಂತೆ ನೋಡಿಕೊಳ್ಳಬೇಕು ಎಂದರು.
ಶಾಸಕರಾದ ಗುರುರಾಜ ಗಂಟಿಹೊಳೆಯವರು ಮಾತನಾಡಿ, ಮೂಕಾಂಬಿಕಾ ಕಾರೀಡಾರ್ ಮೂಲಕ ಸಮೃದ್ಧ ಬೈಂದೂರು ಸಾಕಾರ ಮಾಡಲು ಪ್ರಯತ್ನ ನಡೆಸುತ್ತಿದ್ದೇವೆ. ಈ ಬಾರಿ ಬೈಂದೂರು ಕ್ಷೇತ್ರದಿಂದಲೇ ಬಿ.ವೈ. ರಾಘವೇಂದ್ರ ಅವರಿಗೆ 1 ಲಕ್ಷ ಲೀಡ್ ನೀಡುವ ಸಂಕಲ್ಪ ಮಾಡಿದ್ದು, ಅದರ ಭಾಗವಾಗಿ ಬೂತ್ ಕಡೆಗೆ ಸಮೃದ್ಧ ನಡಿಗೆ ಯಶಸ್ವಿಯಾಗಿ ಪೂರೈಸಿದ್ದೇವೆ. ಒಂದು ಲಕ್ಷ ಲೀಡ್ ಬಂದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆದುಕೊಂಡು ಬರುವ ಭರವಸೆಯನ್ನು ಸಂಸದರಾದ ಬಿ.ವೈ. ರಾಘವೇಂದ್ರ ಅವರು ನೀಡಿದ್ದಾರೆ. ಹೀಗಾಗಿ ಪೇಜ್ ಪ್ರಮುಖರು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಘವೇಂದ್ರ ಉಪ್ಪುಂದ ಮೊದಲಾದವರು ಪೇಜ್ ಪ್ರಮುಖರ ನಿರ್ದಿಷ್ಟ ಜವಾಬ್ದಾರಿಯ ಬಗ್ಗೆ ಮಾರ್ಗದರ್ಶನ ನೀಡಿದರು. ಮುಖಂಡರು, ಕಾರ್ಯಕರ್ತರು, ಪೇಜ್ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.