ಕೊಂಕಣಿ ಸಮುದಾಯ ಬಾಂಧವರೊಂದಿಗೆ ಸಭೆ, ಬಿಜೆಪಿಗೆ ಮತ ಹಾಕಲು ಮನವಿ
ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಂಕಣಿ ಸಮುದಾಯದ ದೇವಸ್ಥಾನಗಳಿಗೆ ಸೋಮವಾರ ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್ ಅವರು ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳೆಯವರೊಂದಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರ ಪ್ರಚಾರ ನಡೆಸಿದರು.
ಮೊದಲಿಗೆ ಶಿರೂರಿನಲ್ಲಿರುವ ಶ್ರೀ ಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ಪ್ರಮುಖರ ಸಭೆ ನಡೆಸಿ, ನಮ್ಮ ಸಮುದಾಯವು ಸದಾ ರಾಷ್ಟ್ರವಾದಿ ಚಿಂತನೆಯನ್ನು ಬೆಂಬಲಿಸಿಕೊಂಡು ಬಂದಿದೆ. ಎಲ್ಲ ಸಂದರ್ಭದಲ್ಲಿ ಬಿಜೆಪಿ ಪರವಾಗಿಯೇ ನಿಂತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಿಯನ್ನಾಗಿಸಲು ನಾವೆಲ್ಲರೂ ಈ ಬಾರಿ ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು. ಆ ಮೂಲಕ ಬಿ ವೈ ರಾಘವೇಂದ್ರ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ನಂತರ ಉಪ್ಪುಂದದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ದೇಶದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವದಿಂದ ಆಗಿರುವ ಬದಲಾವಣೆ ಮತ್ತು ಪ್ರಸ್ತುತ ಮೋದಿಯವರು ದೇಶಕ್ಕೆ ಯಾಕೆ ಬೇಕು ಎನ್ನುವುದನ್ನು ಸಮರ್ಪಕವಾಗಿ ಮನದಟ್ಟು ಮಾಡಿದರು.
ಅಲ್ಲಿಂದ ನಾಯ್ಕನಕಟ್ಟೆಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸಿ ಸಮುದಾಯ ಪ್ರಮುಖರ ಸಭೆ ನಡೆಸಿ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೆ ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎಂಬುದನ್ನು ವಿಸ್ತೃತವಾಗಿ ಬಿಚ್ಚಿಟ್ಟರು. ದೇಶಕ್ಕೆ ಮೋದಿ ಮತ್ತು ಬಿಜೆಪಿ ಇಂದಿನ ಅನಿವಾರ್ಯ. ನಮ್ಮ ಮುಂದಿನ ಪೀಳಿಗೆ ಸುರಕ್ಷಿತ ಮತ್ತು ಸಮೃದ್ಧವಾಗಿ ಇರಬೇಕಾದರೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದು ಕರೆ ಕೊಟ್ಟರು.
ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಮಾತನಾಡಿ, ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ ಒಂದು ಲಕ್ಷ ಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಮಾಡಿದ್ದೇವೆ. ಅದರಂತೆ ಬೂತ್ ಕಡೆಗೆ ಸಮೃದ್ಧ ನಡೆಗೆ ಸಹಿತ ವಿವಿಧ ಸಮಾವೇಶಗಳನ್ನು ಆಯೋಜಿಸಿಲಾಗಿದೆ. ಈ ಬಾರಿ ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಅತ್ಯಂತ ದೊಡ್ಡ ಅಂತರದಲ್ಲಿ ಗೆಲ್ಲಿಸುವಂತೆ ಎಂದು ಮನವಿ ಮಾಡಿದರು.
ಮೂರು ದೇವಸ್ಥಾನಗಳಲ್ಲೂ ಶಾಸಕರು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಸಮುದಾಯದ ಮುಖಂಡರು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.