ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ : ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕಂಬಳ ನಡೆಸಲು ₹೨ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತಿರುವುದರಿಂದ ಸರ್ಕಾರ ಕನಿಷ್ಟ ಒಂದು ಲಕ್ಷ ಅನುದಾನ ನೀಡುವಂತೆ ಸರ್ಕಾರವನ್ನು ಜಿಲ್ಲೆಯ ಸಚಿವರು, ಶಾಸಕರು ಒತ್ತಾಯಿಸಲು ಪ್ರಯತ್ನಿಸಬೇಕು ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ ಹೇಳಿದರು.
ಬ್ರಹ್ಮಾವರ ದಲ್ಲಿ ಶನಿವಾರ ಸಾಂಪ್ರದಾಯಿಕ ಜಿಲ್ಲಾ ಕಂಬಳ ಸಮಿತಿ ಉಡುಪಿ ಜಿಲ್ಲೆಯಲ್ಲಿ 2021-22 ಸಾಲಿನ ಸಾಂಪ್ರದಾಯಿಕ ಕಂಬಳವನ್ನು ಸರ್ಕಾರದ ನಿಯಮಾನುಸಾರ ಕ್ರಮಬದ್ಧವಾಗಿ ಕಂಬಳವನ್ನು ನಡೆಸುವ ಹಾಗು ಸರ್ಕಾರದಿಂದ ಸಿಗುವ ಅನುದಾನದ ಕುರಿತು ಚರ್ಚಿಸಲು ಕಂಬಳದ ಮನೆಯವರು ಹಾಗು ಕೋಣಗಳ ಮಾಲೀಕರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲ ಸಾಂಪ್ರದಾಯಿಕ ಕಂಬಳಗಳನ್ನು ನಡೆಸುವ ದಿನಾಂಕಗಳನ್ನು ಕಂಬಳ ಕೋಣದ ಮಾಲೀಕರ ಅನುಕೂಲಕ್ಕೆ ತಕ್ಕಂತೆ ನಿಗದಿ ಪಡಿಸಲು, ಪ್ರತಿ ತಾಲ್ಲೂಕಿನಲ್ಲಿಕಂಬಳ ಸಮಿತಿಯ ಬಲವರ್ಧನೆ, ಕೋಣಗಳಮಾಲೀಕರ ಒಗ್ಗೂಡುವಿಕೆಗೆ ಪ್ರಯತ್ನಿಸುವ ಬಗ್ಗೆ ಚರ್ಚಿಸಲಾಯಿತು. ಸೋಮವಾರ ಹಾಗೂ ಒಂದೇ ದಿನದಲ್ಲಿ 3ರಿಂದ4 ಕಂಬಳ ನಡೆಸಲು ಅವಕಾಶವಿಲ್ಲ ಎಂದು ಸಾಂಪ್ರದಾಯಿಕ ಜಿಲ್ಲಾ ಕಂಬಳ ಸಮಿತಿ, ತಾಲ್ಲೂಕು ಕಂಬಳ ಸಮಿತಿ ಬೈಂದೂರು ಮತ್ತು ಎಲ್ಲಾ ಕೋಣದ ಯಜಮಾನರು ಕಂಬಳ ಗದ್ದೆಯ ಮನೆಯವರಿಗೆ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ, ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಹೆರಂಜೆ, ಸಂಘಟನಾ ಕಾರ್ಯದರ್ಶಿ ಪ್ರಥ್ವಿರಾಜ ಶೆಟ್ಟಿ ಬಿಲ್ಲಾಡಿ, ಕರುಣಾಕರ ಶೆಟ್ಟಿ ಹಂದಾಡಿ, ಬೈಂದೂರಿನ ವೆಂಕಟ ಪೂಜಾರಿ ಸಸಿಹಿತ್ಲು, ಸುರೇಶ್ ಕಾಂಡಿತಾರ್ ಬೈಂದೂರು ಉಪಸ್ಥಿತರಿದ್ದರು.