ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ :ಸಾಸ್ತಾನ ಟೋಲ್‌ನಲ್ಲಿ ಕೋಟ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ಮುಂದುವರಿಸುವಂತೆ ಆಗ್ರಹಿಸಿ ತಹಶೀಲ್ದಾರ್, ಇನ್ಸ್‌ಪೆಕ್ಟರ್ ಮತ್ತು ಟೋಲ್ ಅಧಿಕಾರಿಗಳೊಂದಿಗೆ ಸೋಮವಾರ ಬ್ರಹ್ಮಾವರ ತಾಲ್ಲೂಕು ಅಡಳಿಯ ಕಚೇರಿಯಲ್ಲಿ ನಡೆದ ಮಾತುಕತೆ ವಿಫಲಗೊಂಡಿದ್ದು, ಮಂಗಳವಾರ ಮತ್ತೆ ಮಾತುಕತೆ ಮುಂದುವರಿಯಲಿದೆ.
ಕಳೆದ ಶನಿವಾರ ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರು ಮತ್ತು ಸ್ಥಳೀಯರು ಸಾಸ್ತಾನ ಟೋಲ್‌ನಲ್ಲಿ ಧಿಡೀರ್ ಪ್ರತಿಭಟನೆ ನಡೆಸಿದ ಸಂದರ್ಭ ಬ್ರಹ್ಮಾವರದ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ ಸೋಮವಾರ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ದೊರಕಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಸೋಮವಾರ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರ ಸಭೆ ತಹಶೀಲ್ದಾರ್ ಶ್ರೀಕಾಂತ ಎಸ್ ಹೆಗಡೆ ಮತ್ತು ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯರಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು, ಹೋರಾಟದ ಫಲವಾಗಿ 2018ರಿಂದ ಸ್ಥಳೀಯರಿಗೆ ಸಿಗುತ್ತಿದ್ದ ಟೋಲ್ ವಿನಾಯಿತಿಯನ್ನು ಮುಂದುವರಿಸುವಂತೆ ಮನವರಿಕೆ ಮಾಡಿದರು. ಇದಕ್ಕೆ ಉತ್ತರಿಸಿದ ಟೋಲ್ ಗುತ್ತಿಗೆ ಪಡೆದುಕೊಂಡಿರುವ ಹೈವೇ ಕನ್‌ಸ್ಟ್ರಕ್ಶ್ಯನ್ 1 ರ ಅಧಿಕಾರಿ ಪ್ರೀತಂ ಗಂಗೂಲಿ ಭಾರತದಾದ್ಯಂತ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಸ್ಥಳೀಯರು ಟೋಲ್‌ಗಳಲ್ಲಿ ಪಾಸ್‌ನ್ನು ತಿಂಗಳೊಂದಕ್ಕೆ ರೂ.310 ಪಾವತಿಸಿ ಸಾಗಬಹುದು. ಇದು ಹೆದ್ದಾರಿ ಇಲಾಖೆಯ ನಿಯಮವಾಗಿದ್ದರಿಂದ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಅಧಿಕಾರಿಗಳಿಂದ ಸಮಂಜಸ ಉತ್ತರ ದೊರಕದ ಕಾರಣ ಮಂಗಳವಾರ ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ರೊಂದಿಗೆ ಮಾತುಕತೆ ನಡೆಸಿ ಮತ್ತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಎಂದು ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಸಭೆಯಲ್ಲಿ ಬ್ರಹ್ಮಾವರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಧು, ಕೋಟ ಠಾಣೆಯ ತೇಜಸ್ವಿ, ಸುಧಾ ಪ್ರಭು, ಸಮಿತಿಯ ಪ್ರಮುಖರಾದ ಪ್ರತಾಪ್ ಶೆಟ್ಟಿ, ವಿಠಲ ಪೂಜಾರಿ, ಅಲ್ವಿನ್ ಅಂದ್ರಾದೆ, ನಾಗರಾಜ ಗಾಣಿಗ, ದಿನೇಶ ಗಾಣಿಗ ಮತ್ತಿತರರು ಇದ್ದರು.