ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಶಿರೂರು ವಿದ್ಯಾರ್ಥಿಯ ಮನೆಗೆ ಶಾಸಕರಾದ ಗುರುರಾಜ ಗಂಟಿಹೊಳೆಯವರು ಭೇಟಿ ಮಾಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು. ಇಂತಹ ನೋವಿನ ಪರಿಸ್ಥಿತಿ ಯಾರಿಂದಲೂ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ತಿಳಿಸಿ ಕುಟುಂಬವನ್ನು ಸಂತೈಸಿದರು.
ಯಾರು ಯಾವುದೇ ಸಂದರ್ಭದಲ್ಲೂ ದುಡುಕಿ ನಿರ್ಧಾರ ಮಾಡುವುದು ಸರಿಯಲ್ಲ ಎಂದು ಶಾಸಕರು ಬಾವುಕರಾದರು.
ಶೈಕ್ಷಣಿಕ ಜೀವನ ಎಲ್ಲರ ಜೀವನದಲ್ಲೂ ಅಮೂಲ್ಯವಾಗಿರುತ್ತದೆ. ಬೈಂದೂರು ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದಲೂ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಗ್ರಾಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಯಾವುದೇ ಕ್ಷಣದಲ್ಲೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ವಿದ್ಯಾರ್ಥಿ ಸಮೂಹಕ್ಕೆ ಸಲಹೆ ನೀಡಿದರು.
ಮಕ್ಕಳ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಬೇಕು. ಈ ರೀತಿಯ ಕೆಟ್ಟ ನಿರ್ಧಾರ ಯಾವುದೇ ಮಗುವಿನಲ್ಲೂ ಬರಬಾರದು. ಆ ನಿಟ್ಟಿನಲ್ಲಿ ಸಮಾಜ ನಿರ್ಮಾಣ ಮಾಡುವ ಜವಾಬ್ದಾಾರಿ ನಮ್ಮೆಲ್ಲರ ಮೇಲೂ ಇದೆ. ವಿದ್ಯಾರ್ಥಿಗಳನ್ನು ಈ ಸಮಾಜದ ಸಂಪತ್ತಾಗಿ ರೂಪಿಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ಎಲ್ಲ ಕಡೆಯಿಂದಲೂ ಸಿಗಬೇಕು. ಮನೆ, ಶಾಲೆ, ಕಾಲೇಜು, ಸಮಾಜ ಹೀಗೆ ಎಲ್ಲ ಕಡೆಗಳಲ್ಲೂ ಸಕಾರಾತ್ಮಕವಾದ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆಯೂ ಎಲ್ಲರೂ ಒಟ್ಟಾಗಿ ಯೋಚನೆ ಮಾಡುವ ಅಗತ್ಯವಿದೆ ಎಂದರು.
ಯಾವುದೇ ಸಂದರ್ಭ ಅಥವಾ ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಯಾರೂ ಕೂಡ ಆತ್ಮಹತ್ಯೆ ಅಂತಹ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಶಾಸಕರಾದ ಗುರುರಾಜ ಗಂಟಿಹೊಳೆ ಮನವಿ ಮಾಡಿದರು.