ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವೈದ್ಯ ಲೋಕಕ್ಕೆ ಸವಾಲಾಗಿರುವ ಎರಡು ಭಿನ್ನ ಮಾದರಿಯ ರಕ್ತ ವರ್ಗಕ್ಕೆ ಸೇರಿದ ಮೂತ್ರ ಪಿಂಡಗಳನ್ನು ಜೋಡಿಸುವಲ್ಲಿ ಕುಂದಾಪುರ ಮೂಲದ ಡಾ. ಇಸ್ತಿಯಾಕ್ ಮತ್ತು ಅವರ ತಂಡ ಯಶಸ್ವಿಯಾಗಿದೆ. ವೈದ್ಯ ಲೋಕದಲ್ಲಿ ತೀರಾ ಅಪರೂಪದ್ದಾಗಿರುವ ಎಬಿಒ ಹೊಂದಾಣಿಕೆಯಾಗದ ಅತ್ಯಂತ ಸಂಕೀರ್ಣವಾದ ಈ ಶಸ್ತ್ರ ಚಿಕಿತ್ಸೆಯನ್ನು ಅಬುದಾಭಿಯ ಖ್ಯಾತ ಆಸ್ಪತ್ರೆ ಬುರ್ಜೀಲ್ ಮೆಡಿಕಲ್ ಸಿಟಿ ಆಸ್ಪತ್ರೆಯಲ್ಲಿ ನಡೆಸಲು ವೈದ್ಯ ಡಾ.ಇಸ್ತಿಯಾಕ್ ಮತ್ತು ತಂಡ ತೀರ್ಮಾನಿಸಿದ್ದಲ್ಲದೇ ಯಶಸ್ವಿಯಾಗಿರುವುದನ್ನು ಗಲ್ಫ್ ಮಾಧ್ಯಮಗಳು ಹೆಡ್ ಲೈನ್ ನಲ್ಲಿ ಬಣ್ಣಿಸಿವೆ.
ತಮ್ಮ ಎರಡು ಪುಟ್ಟ ಮಕ್ಕಳೊಂದಿಗೆ 2018ರಿಂದ ಅಬುಧಾಬಿಯಲ್ಲಿ ವಾಸ್ತವ್ಯವಿರುವ ಅನಿವಾಸಿ ಭಾರತಿಯರಾಗಿರುವ ರೇವತಿ ಹಾಗು ಕಾರ್ತಿಕೇಯನ್ ದಂಪತಿಗಳ ಪೈಕಿ 32ವರ್ಷ ಹರೆಯದ ರೇವತಿ ಅವರು ಮೂತ್ರ ಪಿಂಡಗಳಲ್ಲಿ ಸೋಂಕು ಕಂಡು ಬಂದಿತ್ತು. 2022ರ ನಂತರ ಹಿಮೋ ಡಯಾಲಿಸಿಸ್ ನಂತಹ ಹಲವು ಚಿಕಿತ್ಸೆಗಳ ನಂತರವೂ ಹೃದಯ ಸ್ತಂಭನದಿಂದ ಪ್ರಾಣಕ್ಕೆ ಕಂಟಕವಾಗಿ ನಿಷ್ಕ್ರಿಯ ಗೊಂಡ ಅವರ ಮೂತ್ರ ಪಿಂಡಗಳನ್ನು ಬದಲಾಯಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿತ್ತು .ಹಾಗಾಗಿ ದಂಪತಿಗಳು ಮೃತ ದೇಹಗಳ ಸಹಿತ ಇನ್ನಿತರ ಜೀವಂತ ಕಿಡ್ನಿ ದಾನಿಗಳ ಮೊರೆ ಹೋದರೂ ಯಾವುದೇ ಫಲ ಸಿಗದೇ ದಿನೇ ದಿನೇ ರೇವತಿ ಸಾವಿನ ಮನೆಯತ್ತ ಸರಿಯಲಾರಂಭಿಸಿದರು. ಈ ಸಂದರ್ಭದಲ್ಲಿ ಮಗಳ ನೋವನ್ನು ಸಹಿಸಲಾಗದ ರೇವತಿ ತಂದೆ ತಮ್ಮ ಮೂತ್ರ ಪಿಂಡವನ್ನು ಮಗಳಿಗೆ ದಾನನೀಡಲು ಮುಂದಾದರು. ವಿಪರ್ಯಾಸವೆಂದರೆ ತಂದೆ ಮಗಳ ರಕ್ತಮಾದರಿ ಹೋಲಿಕೆಯಾದರೂ ಹೃದಯ ಸಮಸ್ಯೆ ಹಾಗೂ ಹೆಚ್ಚಿನ ಮಟ್ಟದ ರಕ್ತದೊತ್ತಡದ ಕಾರಣದಡಿ ರೇವತಿ ಅವರ ತಂದೆಯ ಮೂತ್ರಪಿಂಡಗಳ ಕಸಿ ಯನ್ನು ಕೊನೆ ಕ್ಷಣಗಳಲ್ಲಿ ಅನರ್ಹ ಗೊಳಿಸಲಾಗಿತ್ತು. ಇತ್ತ ಸಾವು ರೇವತಿಯ ನೆತ್ತಿಯ ಮೇಲೆ ತೂಗುಯ್ಯಾಲೆಯಾಡುತ್ತಿತ್ತು.
ಪತ್ನಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕಿತ್ತು. ತನ್ನ ಮೂತ್ರ ಪಿಂಡ ವನ್ನು ನೀಡಲು ಪತಿ ಕಾರ್ತಿಕೇಯನ್ ತುದಿಗಾಲಿನಲ್ಲಿ ನಿಂತಿದ್ದರೂ ರಕ್ತ ಮಾದರಿ ಬೇರೆಯಾಗಿದ್ದರಿಂದ ಮೂತ್ರ ಪಿಂಡ ಕಸಿಯ ದುಸ್ಸಾಹಸಕ್ಕೆ ಮುಂದಾಗದ ವೈದ್ಯರು ಕೈಚೆಲ್ಲಿದ್ದರು.
ಆದರೆ ರೇವತಿ ಪತಿ ಕಾರ್ತಿಕೇಯನ್ ದೃತಿಗೆಡಲಿಲ್ಲ. ಅಬುಧಾಬಿ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿ ರುವ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್ ಪ್ಲಾಂಟ್ ತಜ್ಞ ಡಾ. ಇಸ್ತಿಯಾಕ್ ಅಹ್ಮದ್ ಅವರನ್ನು ಸಂಪರ್ಕಿಸಿದ್ದಾರೆ. ಬುರ್ಜಿಲ್ ಆಸ್ಪತ್ರೆಯ ಡಾ.ಇಸ್ತಿಯಾಕ್ ನೇತೃತ್ವದ ಡಾ. ರೀಹಾನ್ ಸೈಫ್, ಡಾ.ವೆಂಕಟ್ ಸೈನರೇಶ್, ಡಾ.ರಾಮಮೂರ್ತಿ ಜಿ.ಭಾಸ್ಕರನ್, ಡಾ. ನಿಕೋಲಸ್ ವ್ಯೋನ್ ನೆಫ್ರಾಲಜಿಸ್ಟ್ ವೈದ್ಯ ತಂಡವು ರೇವತಿ ಅವರ ಮೂತ್ರ ಪಿಂಡ ಕಸಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಹಲವು ದಿನಗಳ ತುರ್ತು ನಿಗಾ ಘಟಕದ ನಂತರ ರೇವತಿ ಅವರ ದೇಹವು ಮೂತ್ರಪಿಂಡ ಕಸಿಗೆ ಹೊಂದಿಕೊಂಡಿದ್ದು ಅವರು ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ.
ಕುಂದಾಪುರದ ಉದ್ಯಮಿ ಹಾಜಿ ಅಬ್ದುಲ್ ಖಾದರ್ ಯೂಸುಫ್ ಅವರ ಪುತ್ರರಾಗಿರುವ ಡಾ. ಇಸ್ತಿಯಾಕ್. ಕುಂದಾಪುರ ಗರ್ಲ್ಸ್ ಶಾಲೆ, ಬೋರ್ಡ್ ಹೈಸ್ಕೂಲ್, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮಂಗಳೂರಿನ ಕೆ.ಎಂ.ಸಿ. ಯಲ್ಲಿ ಎಂ.ಬಿ.ಬಿ.ಎಸ್. ಎಂ.ಡಿ ಪದವಿ ಪಡೆದು, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಡಿ.ಎಂ. ಪುರಸ್ಕೃತರಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಸಹಿತ ಹಲವು ಖ್ಯಾತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಇದೀಗ ಅಬುದಾಭಿಯ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದಾರೆ.