ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಿಧಾನಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿಯವರ ಹೆಸರನ್ನು ಹಿಂದೆ ಕೆ.ಎಸ್.ಈಶ್ವರಪ್ಪನವರೇ ಸೂಚಿಸಿದ್ದರು. ಪಾಪ ಈಗ ಅವರು ಅದನ್ನು ಮರೆತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಅವರು ಕುಂದಾಪುರದ ಕುಮಭಾಸಇ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹಾಸನದ ಉದ್ಯಮಿ ಜಿ. ರಾಘವೇಂದ್ರ ಉಪಾಧ್ಯಾಯ ಕುಟುಂಬಸ್ಥರು ನಡೆಸಿದ ಸಹಸ್ರ ನಾರಿಕೇಳ ಗಣ ಯಾಗದಲ್ಲಿ ಪತ್ನಿ ಪ್ರೇಮ ವಿಜಯೇಂದ್ರ ಸಹಿತ ಭಾಗಿಯಾಗಿ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ 6 ಕ್ಷೇತ್ರದ ಚುನಾವಣೆಗಳಿಗೆ ವಿಧಾನಪರಿಷತ್ ಚುನಾವಣೆ ನಡೆಯುತ್ತಿದ್ದು, ಈ ಭಾಗದ ಎಲ್ಲಾ ನಮ್ಮ ಶಾಸಕರು, ವಿಧಾನಪರಿಷತ್ ಸದಸ್ಯರು, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಯಾವುದೇ ಗೊಂದಲ ಇಲ್ಲದೇ. ವ್ಯತ್ಯಾಸವಿಲ್ಲದೇ ಒಗ್ಗಟ್ಟಾಗಿ, ಡಾ. ಧನಂಜಯ ಸರ್ಜಿಯವರ ಪರವಾಗಿ ಅದೇ ರೀತಿ ಭೋಜೇಗೌಡರ ಪರವಾಗಿ ಶ್ರಮ ಹಾಕುತ್ತಿದ್ದಾರೆ. ಮಾನ್ಯ ಈಶ್ವರಪ್ಪನವರು ನಮ್ಮ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಬಗ್ಗೆ ಅನೇಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ, ಈ ದೇವಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ. ಪದವೀಧರ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡ್ಬೇಕು ಅಂತ ಚರ್ಚೆ ಆದಾಗ ಈಶ್ವರಪ್ಪನವರೇ ಡಾ. ಧನಂಜಯ ಸರ್ಜಿಯವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಬಹುಷ ಈಗ ಅವರು ಮರೆತಿದ್ದಾರೆ ಅನ್ನಿಸುತ್ತಿದೆ. ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ನಮ್ಮದಾಗಲಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯಷ್ಟೇ ಅಥವಾ ಅದಕ್ಕಿಂತ ಒಂದು ಹೆಚ್ಚು ಸ್ಥಾನವನ್ನು ನಾವು ಗೆಲ್ತೇವೆ. ಕಾಂಗ್ರೆಸ್ ಪಕ್ಷ, ಮಾನ್ಯ ಮುಖ್ಯಮಂತ್ರಿಗಳು ಭ್ರಮೆಯಲ್ಲಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದೀಜಿಯವರ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಬಹಳ ವಿಶ್ವಾಸದಲ್ಲಿದ್ದಾರೆ, ಅವರಿಗೆ ದೊಡ್ಡ ನಿರಾಸೆ ಕಾದಿದೆ. ಜೂನ್ 4ನೇ ತಾರೀಖಿಗೆ ಮತ ಎಣಿಕೆ ಆದಾಗ ಕಾಂಗ್ರೆಸ್ ಮುಖಭಂಗ ಅನುಭವಿಸುತ್ತದೆ ಎಂದು ಭವಿಷ್ಯ ನುಡಿದರು. ನಮ್ಮ ಗೆಲುವನ್ನು ತಡೆಯುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದ ಅವರು, ನಿಸ್ಸಂಶಯವಾಗಿ ಬಿಜೆಪಿ ಹಾಗೂ ಜೆಡಿಎಸ್ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದರು. ಅವರು ನಂಬಿದ ಗ್ಯಾರೆಂಟಿ ಅವರಿಗೆ ಕೈಕೊಡುತ್ತದೆ ಎಂದ ಅವರು, ಮತದಾರರು ದೇಶದ ಅಭಿವೃದ್ಧಿಯನ್ನು ಮೆಚ್ಚಿ, ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಬಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರ ಅಂತಿಮ ಹೆಸರುಗಳು ಇವತ್ತು ಘೋಷಣೆಯಾಗಬಹುದು ಎಂದ ಅವರು, ಈ ಬಗ್ಗೆ ರಾಷ್ಟ್ರಾಧ್ಯಕ್ಷರ ಜೊತೆ ಚರ್ಚೆ, ಸಮಾಲೋಚನೆ ಮಾಡಿದ್ದೇನೆ. ಅನೇಕ ಹೆಸರುಗಳ ಬಗ್ಗೆ ಪ್ರಸ್ಥಾಪ ಆಗಿದೆ. ನಾವು ಇವತ್ತು ನಿರ್ಧಾರವನ್ನು ಘೋಷಣೆ ಮಾಡ್ತೇವೆ. ಕಾಂಗ್ರೆಸ್ಸು ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡ್ತಿದೆ. ಬಹಳ ದಿನ ಅವರ ಆಟಗಳು ನಡೆಯೋದಿಲ್ಲ. ರಾಹುಲ್ ಗಾಂಧಿ ಏನು, ಅವರ ವ್ಯಕ್ತಿತ್ವ ಏನು, ಅವರ ನಾಯಕತ್ವ ಏನು ಎಷ್ಟರ ಮಟ್ಟಿಗೆ ಎಲ್ಲಾ ಕೂಡಾ ದೇಶದ ಜನ, ರಾಜ್ಯದ ಜನ ನೋಡಿದ್ದಾರೆ. ಯಾವುದೇ ಬೂಟಾಟಿಕೆ ಜನರ ಮನಸ್ಸನ್ನು ಗೆಲ್ಲೋದಿಕ್ಕ ಸಾಧ್ಯವಿಲ್ಲ ಎಂದರು.
ಈ ಸಂದರ್ಭ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ, ಮಂಗಳೂರು ಪ್ರಭಾರಿ ರಾಜೇಶ್ ಕಾವೇರಿ ಹಾಜರಿದ್ದರು.