ಕುಂದಾಪುರ ಮಿರರ್ ಸುದ್ದಿ…
ಕೋಟ: ಗ್ರಾಮೀಣ ಕರಾವಳಿ ಭಾಗದಲ್ಲಿ ಪಚ್ಚಿಲೇ ಕೃಷಿಯ ಮೂಲಕ ಸ್ವಾವಲಂಬಿ ಬದುಕು ಸಾಧ್ಯವಿದೆ ಎಂದು ಕೋಟದ ಮತ್ಸ್ಯೋದ್ಯಮಿ ಆನಂದ್ ಸಿ ಕುಂದರ್ ಹೇಳಿದರು.
ಶುಕ್ರವಾರ ಕೋಡಿ ಕನ್ಯಾಣದ ಪರಿಸರದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ,ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಮೀನುಗಾರಿಕಾ ಕಾಲೇಜು ಮಂಗಳೂರು, ಸ್ಕೊಡ್‍ವೆಸ್ ಸಂಸ್ಥೆ, ಆಯುಷ್ಮಾನ್‍ಭವ ಸಂಸ್ಥೆ, ಉಡುಪಿ ಕಿನಾರ ಮೀನುಗಾರ ಉತ್ಪಾದಕ ಕಂಪನಿ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಜಂಟಿ ಆಶ್ರಯದಲ್ಲಿ ಪಚ್ಚಿಲೇ ಮೇಳ 2024 ಅನ್ನು
ಉದ್ಘಾಟಿಸಿ ಮಾತನಾಡಿ ಪಚ್ಚಿಲೇ ಕೃಷಿ ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಸಿದ್ಧಗೊಳ್ಳುತ್ತಿದೆ.
ಪುರುಷ ಮಹಿಳೆಯರು ಸರಿಸಮಾನವಾಗಿ ಈ ಸ್ವಉದ್ಯೋಗದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಪಚ್ಚಿಲೇ ಕೃಷಿ ರಾಜ್ಯಾದ್ಯಂತ ಪ್ರಸಿದ್ಧಿಗೊಳ್ಳುತ್ತಿದೆ.ಆಧುನಿಕತೆಗೆ ತಕ್ಕಂತೆ ಮೀನುಗಾರಿಕಾ ಕ್ಷೇತ್ರ ಬದಲಾವಣೆ ಅಗತ್ಯವಾಗಿದೆ ಎಂದರಲ್ಲದೆ ಇತ್ತೀಚಿಗಿನ ದಿನಗಳಲ್ಲಿ ಮೀನುಗಾರಿಕಾ ಉತ್ಪನ್ನಗಳು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಮತ್ಸಮೇಳಗಳ ಮೂಲಕ ಯುವ ಆಸಕ್ತ ಮನಸ್ಸುಗಳನ್ನು ಈ ಉದ್ಯಮದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮೇಳದಲ್ಲಿ ಕಂಡಬಂದ ಪರಿಸರಸ್ನೇಹಿ ಚೀಲ ಪ್ರಶಂಸೆ
ಈ ಮತ್ಸಮೇಳದಲ್ಲಿ ವಿಶೇಷವಾಗಿ ಮೆಕ್ಕೆಜೋಳದ ಪರಿಸರಸ್ನೇಹಿ ಕೈಚೀಲ ವಿಶೇಷವಾಗಿ ನೆರದಿದ್ದವರನ್ನು ಆಕರ್ಷಿಸಿತು. ಆನಂದ್ ಸಿ ಕುಂದರ್ ಇದರ ಹೆಚ್ಚು ಹೆಚ್ಚು ಬಳಕೆಗೆ ಕರೆಕೊಟ್ಟರಲ್ಲದೆ ಪ್ರಸ್ತುತ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮೀನು ಸಂತತಿಗೆ ಹಾನಿಯಾಗುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಮತ್ಸಮೇಳದಲ್ಲಿ ಮಳಿಗೆಯನ್ನು ಉಡುಪಿ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮತ್ಸ್ಯ ಮೇಳಗಳಿಂದ ಮೀನುಗಾರಿಕಾ ಕ್ಷೇತ್ರ ಲಾಭದಾಯಕಗೊಳ್ಳುತ್ತಿರುವುದು ಸೇರಿದಂತೆ ಸರಕಾರದ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಇದರ ಡೀನ್ ಡಾ. ಎಚ್. ಎನ್. ಆಂಜನೇಯಪ್ಪ, ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‍ರಾಜ್, ಉಪನಿರ್ದೇಶಕ ಡಾ.ರಾಜೇಶ್, ಮೀನುಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಜಂಟಿ ನಿರ್ದೇಶಕ ವಿವೇಕ್ ಆರ್, ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಂಕಿತ ಅಧಿಕಾರಿ ಡಾ. ಪ್ರವೀಣ್ ಸಿ ಎಚ್, ಉಡುಪಿ ಲೀಡ್ ಬ್ಯಾಂಕ್ ಮ್ಯಾನೇಜರ್, ಹರೀಶ್ ಜಿ.,ಮತ್ಸ್ಯೋದ್ಯಮಿ ಶಂಕರ್ ಕುಂದರ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಕೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಜಿಲ್ಲಾ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎ ಅಶೋಕ್ ಕುಮಾರ್ ಕೊಡ್ಗಿ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಅಧ್ಯಕ್ಷ ಲೋಹಿತ್ ಖಾರ್ವಿ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷೆ ಬೇಬಿ ಮೆಂಡನ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮೀನು ಸಂಸ್ಕರಣಾ ತಂತ್ರಜ್ಞಾನ ಇಲಾಖೆ ಮಂಗಳೂರು ಇದರ ಪ್ರಾಧ್ಯಾಪಕ ಡಾ.ಬಿ.ಮಂಜು ನಾಯ್ಕ್ ಭಾಗವಹಿಸಿದರು. ಕಾರ್ಯಕ್ರಮವನ್ನು ಸ್ಕೊಡ್‍ವೆಸ್ ಸಂಸ್ಥೆಯ ಸಂಯೋಜಕ ಗಂಗಾಧರ್ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು. ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದೀನ ಕೋಡಿ ವಂದಿಸಿದರು.