ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆಯೆನ್ನಲಾದ ವಿವಾಹಿತ ಮಹಿಳಾ ವೈದ್ಯಾಧಿಕಾರಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿಯವರು ಆರೋಪಿ ರಾಬರ್ಟ್ ರೆಬೆಲ್ಲೋ ಅವರನ್ನು ಕರ್ತವ್ಯವಿಂದ ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ.
ಈ ಕುರಿತಾಗಿ, ಆದೇಶ ನೀಡಿರುವ ಡಿಸಿ ವಿದ್ಯಾಕುಮಾರಿ ಅವರು, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯ ಬಳಿಕ ಈ ಆದೇಶ ನೀಡಿರುವುದಾಗಿ ತಿಳಿದು ಬಂದಿದೆ.
ಆರೋಪಿ ರಾಬರ್ಟ್ ರೆಬೆಲ್ಲೋ ಅದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಈ ಪ್ರಕರಣದ ಸುಗಮ ತನಿಖೆಗೆ ಅಡ್ಡಿ ಉಂಟು ಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಹಾಗೂ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿರುವುದರಿಂದ ಡಾ| ರಾಬರ್ಟ್ ರೆಬೆಲ್ಲೋ ಆಡಳಿತ ವೈದ್ಯಾಧಿಕಾರಿ ಉಪವಿಭಾಗೀಯ ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆಯುಕ್ತರು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯಕ್ತಾಲಯ ಬೆಂಗಳೂರು ಇವರಿಗೆ ವರದಿ ಮಾಡಿಕೊಳ್ಳುವಂತೆ ಆದೇಶಿಸಿದ್ದಾರೆ.
ಅಲ್ಲದೇ ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಕುಷ್ಟ ರೋಗ ನಿವರಣಾಧಿಕಾರಿ ಡಾ. ಲತಾ ನಾಯಕ್ ಅವರನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರದ ಆಡಳಿತಾಧಿಕಾರಿ ಹುದ್ದೆಗೆ ವರ್ಗಾಯಿಸಿ ಆದೇಶ ನೀಡಿದ್ದಾರೆ.