ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರದ ಪಂಚಾಗಂಗಾ ನದಿಯಲ್ಲಿ ಚಿಪ್ಪು ಸಾಗಾಟ ಮಾಡುತ್ತಿದ್ದ ಬಾಲಾಜಿ ಹೆಸರಿನ ಹಾಯಿ ದೋಣಿ ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ಜೂನ್ 9ರಂದು ಹಸ್ತಾಂತರಿಸಲಾಗುವುದು. ಕುಂದಾಪುರ ಖಾರ್ವಿಕೇರಿಯ ಮಧ್ಯಕೇರಿಯ ನಿವಾಸಿ ದಿ. ಶಂಕರ್ ಖಾರ್ವಿಯವರ ಪುತ್ರ ವೆಂಕಟೇಶ್ ಅವರ ಮಾಲಿಕತ್ವದ ಈ ಹಾಯಿ ದೋಣಿ ಸೇವೆಯಿಂದ ಮುಕ್ತವಾಗಿದ್ದು ಅದರ ಸದ್ಭಳಕೆಯ ಉದ್ದೇಶದಿಂದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಲ್ಲಿ ಪ್ರಸ್ತಾವಿಸಿದ್ದು ಅವರು ಒಪ್ಪಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ದೋಣಿಯನ್ನು ಶ್ರೀ ಕ್ಷೇತ್ರಕ್ಕೆ ಕೊಂಕಣ ಖಾರ್ವಿ ಸಮಾಜದ ಕಾಣಿಕೆಯಾಗಿ ನೀಡಲಾಗುವುದು ಎಂದು ಕುಂದಾಪುರ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷರಾದ ಜಯಾನಂದ ಖಾರ್ವಿ ತಿಳಿಸಿದ್ದಾರೆ.
ಅವರು ಕುಂದಾಪುರದ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸುಮಾರು 14 ವರ್ಷಗಳ ಹಿಂದೆ ಚಿಪ್ಪು ಸಾಗಾಟದ ಉದ್ದೇಶಕ್ಕೆ ದೋಣಿಯ ನಿರ್ಮಾಣದ ಹುಡುಕಾಟದಲ್ಲಿದ್ದಾಗ ಕಂಡ್ಲೂರು ಸಮೀಪ ದೊರೆತ ಸುಮಾರು 20 ಅಡಿ ಸುತ್ತಳತೆಯ ಬೃಹತ್ ಮರದಿಂದ ದೋಣಿ ನಿರ್ಮಿಸಲಾಗಿದೆ. ಸುಮಾರು 51 ಅಡಿ ಉದ್ದ, 10 ಅಡಿ ಅಗಲದ ಈ ದೋಣಿಯಲ್ಲಿ ಒಂದು ಮುಕ್ಕಾಲು ಲೋಡ್ ಚಿಪ್ಪು ಸಾಗಾಟ ಮಾಡಲಾಗುತ್ತಿತ್ತು. ಅಂದಿನ ದಿನಗಳಲ್ಲಿಯೇ ದೋಣಿ ನಿರ್ಮಿಸಲು 2.5ಲಕ್ಷ ವೆಚ್ಚವಾಗಿತ್ತು ಎಂದರು.
ಮುಂಬಯಿಂದ ಮಂಗಳೂರು ತನಕ ಸಮುದ್ರದ ತಟದಲ್ಲಿ ಬದುಕು ಕಟ್ಟಿಕೊಂಡಿರುವ ಕೊಂಕಣ ಖಾರ್ವಿ ಸಮಾಜ ಚಿಪ್ಪು, ಮೀನುಗಾರಿಕೆಯ ಮೂಲಕ ಜೀವನ ನಡೆಸುತ್ತಾರೆ. ಚಿಪ್ಪು ಸಂಗ್ರಹಣೆಯ ಉದ್ಯೋಗವೂ ಈಗ ನಶಿಸುತ್ತಿದ್ದು ಹೊಸ ತಲೆಮಾರು ಈ ವೃತ್ತಿಗೆ ಬರುತ್ತಿಲ್ಲ. ಅಲ್ಲದೇ ವೃತ್ತಿಯಿಂದ ಮುಕ್ತವಾಗುತ್ತಿರುವ ದೋಣಿಯನ್ನು ಶ್ರಮಸಂಸ್ಕøತಿಯ ಪ್ರತೀಕವಾದ ಕೊಂಕಣಖಾರ್ವಿ ಸಮಾಜದ ಸಂಕೇತವಾಗಿ ಈ ದೋಣಿಯನ್ನು ಧರ್ಮಸ್ಥಳದ ವಸ್ತು ಸಂಗ್ರಹಾಲಯದಲ್ಲಿ ಪ್ರವಾಸಿಗರಿಗೆ ಸಿಗಲಿದೆ ಎಂದರು.
ಜೂ 9ರಂದು ಕುಂದಾಪುರ ಫೇರ್ರಿ ರಸ್ತೆಯಿಂದ ಮೆರವಣೀಗೆಯ ಮೂಲಕ ದೋಣಿಯನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ತನಕ ಕರೆತಂದು ಬೀಳ್ಕೊಡಲಾಗುವುದು. ಧರ್ಮಸ್ಥಳದಲ್ಲಿ ವಿದ್ಯುಕ್ತವಾಗಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲಾಗುವುದು ಎಂದರು.
ದೋಣಿ ಮಾಲಿಕರಾದ ವೆಂಕಟೇಶ ಖಾರ್ವಿ ಮಾತನಾಡಿ, ನಮ್ಮ ತಂದೆಯವರಿಗೆ ದೊಡ್ಡ ದೋಣಿ ಮಾಡುವ ಕನಸಿತ್ತು. ಅವರು ತಾಂಡೇಲರಾಗಿದ್ದರು. ನಾನು ಟೈಲರಿಂಗ್ ವೃತ್ತಿ ಮಾಡುತ್ತಿದ್ದೆ. ತಂದೆ ನಿರ್ವಹಿಸುತ್ತಿದ್ದ ಕೆಲಸ ನಿರ್ವಹಿಸುವ ಇಚ್ಛೆಯಿಂದ ಈ ದೋಣಿ ಕಟ್ಟಿಸಿದೆ. ಈಗ ಚಿಪ್ಪು ಉದ್ಯಮಕ್ಕೆ ಜನರು ಬರುವುದು ಕಡಿಮೆಯಾಗಿದೆ. ಹಾಗಾಗಿ ದೋಣಿ ನಿರ್ವಹಣೆ ಇಲ್ಲದೆ ಹಾಳಾಗಬಾರದು. ನೂರಾರು ವರ್ಷ ಇರಬೇಕು. ಏಕೆಂದರೆ ಇದು ನಿರ್ಜಿವ ವಸ್ತುವಾದರೂ ನಮಗೆ ಬದುಕು ಕೊಟ್ಟಿದೆ. ಹಾಗಾಗಿ ಇಷ್ಟೊಂದು ಉದ್ದದ ದೋಣಿಯನ್ನು ಧರ್ಮಸ್ಥಳದ ವಸ್ತು ಪ್ರದರ್ಶನಾಲಯದಲ್ಲಿ ಇರಿಸುವ ಬಗ್ಗೆ ಹೆಗ್ಡೆಯವರಲ್ಲಿ ಮನವಿ ಮಾಡಿದಾಗ ಅನುಮತಿ ಸಿಕ್ಕಿತು. ಮೊದಲಿಂತೆ ದೋಣಿಯನ್ನು ವ್ಯವಸ್ಥಿತಗೊಳಿಸಿ, ಹಾಯ್ ಜೋಡಣೆ ಮಾಡಿಯೇ ಧರ್ಮಸ್ಥಳಕ್ಕೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ದಿನಕರ ಖಾರ್ವಿ, ಸತೀಶ್ ಖಾರ್ವಿ ಉಪಸ್ಥಿತರಿದ್ದರು.