ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ – ಆನಂದ್ ಸಿ ಕುಂದರ್
ಕುಂದಾಪುರ ಮಿರರ್ ಸುದ್ದಿ…
ಕೋಟ: ಓರ್ವ ನಟನ ಹೆಸರಿನಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಯೋಜನೆ ರೂಪಿಸುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ನುಡಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ನಟ ದಿ. ಪುನಿತ್ ರಾಜ್ ಕುಮಾರ್ ಹೆಸರಿನಲ್ಲಿ ರೂಪಿಸಿದ ವಿದ್ಯಾನಿಧಿ ಯೋಜನೆಯ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರದ 4ನೇ ವರ್ಷದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಕರ ವಿತರಿಸಿ ಮಾತನಾಡಿ ಶೈಕ್ಷಣಿಕವಾಗಿ ಹಿಂದುಳಿದ ಅಶಕ್ತ ಕುಟುಂಬಗಳ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪಂಚವರ್ಣದ ಯೋಜನೆ ಇತರ ಯುವಕ ಮಂಡಲಕ್ಕೆ ಪ್ರೇರಣೆಯನ್ನು ನೀಡಲಿದೆ. ಯುವಕ ಮಂಡಲಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದಾಗ ಆ ಭಾಗಗಳು ಸುಭಿಕ್ಷೆಗೊಳ್ಳುತ್ತದೆ ಈ ದಿಸೆಯಲ್ಲಿ ಪಂಚವರ್ಣ ಸಂಸ್ಥೆ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಮನೆಮಾತಾಗಿ ಬೆಳೆದು ನಿಂತಿದೆ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ನಮ್ಮ ಸಂಸ್ಥೆ ಪಂಚವರ್ಣದ ಮೂಲಕ ಪಡೆದುಕೊಳ್ಳಲಿದೆ ಎಂದರು.
ಇದೇ ವೇಳೆ ವಿದ್ಯಾನಿಧಿ ಯೋಜನೆಯ ಎರಡನೇ ಬಡ ವಿದ್ಯಾರ್ಥಿಯನ್ನು ಸ್ನೇಹಕೂಟದ ಭಾರತಿ ವಿಷ್ಣುಮೂರ್ತಿ ಮಯ್ಯ ಪಂಚವರ್ಣ ಸಂಸ್ಥೆಯ ಮೂಲಕ ದತ್ತು ಸ್ಚೀಕರಿಸಿದರು.
ಪಂಚವರ್ಣ ಸಂಸ್ಥೆ ಶೈಕ್ಷಣಿಕ ದತ್ತು ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಸುಮಾರು 40 ಸಾವಿರ ಅಧಿಕ ಮೌಲ್ಯದ ಪರಿಕರಗಳನ್ನು ಆನಂದ್ ಸಿ ಕುಂದರ್ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸ್ನೇಹಕೂಟದ ಭಾರತಿ ವಿಷ್ಣುಮೂರ್ತಿ ಮಯ್ಯ ದಂಪತಿಗಳು,ಕೋಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಇದ್ದರು.
ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾರ ಎಂ.ಬಾಯರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಸದಸ್ಯ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.