ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನಮಗೆ ದೇಶ, ಸರಕಾರ, ಸಮಾಜ ಏನು ಮಾಡಿದೆ ಎಂಬುದಕ್ಕಿಂತ ನಾವುಗಳು ಸಮಾಜ, ದೇಶಕ್ಕೆ ಏನು ಕೊಡುಗೆ ನೀಡಿದ್ದೆವೆ, ನೀಡುತ್ತಿದ್ದೇವೆ ಎಂಬುದು ಮುಖ್ಯ ಎಂದು ಟ್ರಸ್ಟ್ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಹೇಳಿದರು.
ಅವರು ಜೂ. 11 ರಂದು ಮಂಗಳವಾರ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ 2024-25 ನೇ ಸಾಲಿನ ಪಿ.ಸಿ.ಎಮ್.ಸಿ.(PCMC) ವಿಭಾಗದ ವಸತಿ ನಿಲಯ ವಿದ್ಯಾರ್ಥಿಗಳ ಪಾಲಕರ-ಶಿಕ್ಷಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸರಕಾರಿ ಶಾಲೆಯಲ್ಲಿ ಕಲಿತ ಎಸ್ಸೆಸ್ಸೆಲ್ಸಿ ಯಲ್ಲಿ 600 ಕಿಂತ ಹೆಚ್ಚು ಅಂಕ ಗಳಿಸಿದ ಪ್ರಥಮ 50 ವಿದ್ಯಾರ್ಥಿಗಳಿಗೆ ಎಂ.ಎಂ ಹೆಗ್ಡೆ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಶಿಕ್ಷಣ ನೀಡಲಾಗುವುದೆಂದು ಹೇಳಿದರು.
ಅಲ್ಲದೆ ತಮ್ಮ ಸಂಸ್ಥೆಯಲ್ಲಿರುವ ಬೋಧಕ ಸಿಬ್ಬಂದಿ ವರ್ಗ, ನಿರಂತರವಾಗಿ ನಡೆಯುವ ತರಗತಿಗಳು, ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಹಾಗೂ ಸಂಸ್ಥೆಯಲ್ಲಿ ನಡೆಯುವ ವಿವಿಧ ಸವಲತ್ತುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆಡಳಿತ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯವೈಖರ್ಯ ಕುರಿತು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಿ ಪರೀಕ್ಷಾ ಫಲಿತಾಂಶ, ಪರೀಕ್ಷಾ ತಯಾರಿ, ಉಪನ್ಯಾಸಕರ ಮಾರ್ಗದರ್ಶನ ಕಾಲೇಜ್ ವಸತಿ ನಿಲಯದಲ್ಲಿ ದೊರೆಯುವ ವಿವಿಧ ಸವಲತ್ತುಗಳು, ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ, ಮಕ್ಕಳಿಗೆ ಮನರಂಜನೆಗಳು, ಧಾರ್ಮಿಕ ಹಬ್ಬಗಳ ಆಚರಣೆ ಮತ್ತು ಸಂಸ್ಥೆಯ ವಿಶೇಷತೆಗಳ ಬಗ್ಗೆ ಸ್ಥೂಲವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ PCMC ವಿಭಾಗದ ಮುಖ್ಯಸ್ಥರಾಗಿರುವ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ರಜಿನಿ, ರಸಾಯನಶಾಸ್ತ್ರದ ಮುಖ್ಯಸ್ಥ ಹರಿ ಶರ್ಮ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಝಹಿರ್ ಅಬ್ಬಾಸ್ ಇವರುಗಳು ವಿದ್ಯಾರ್ಥಿಗಳ ಯಶಸ್ವಿಗೆ ಮುನ್ನುಡಿಯಾಗಿ ಪ್ರಸ್ತುತ ಶೈಕ್ಷಣಿಕ ವರ್ಷದ ಪಠ್ಯ ವಿಷಯಗಳ ಬಗ್ಗೆ ತಮ್ಮ ಯೋಜನೆ, ಯೋಚನೆಗಳನ್ನು ಪಾಲಕರಿಗೆ,ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿದ್ದರು.
ಅಧ್ಯಾಪಕ ಶ್ರೀನಿವಾಸ ವೈದ್ಯ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.