ಮಣೂರಿನಲ್ಲಿ ಪಂಚವರ್ಣದ 215ನೇ ಪರಿಸರಸ್ನೇಹಿ ಹಸಿರುಜೀವ ಅಭಿಯಾನ
ಕುಂದಾಪುರ ಮಿರರ್ ಸುದ್ದಿ…
ಕೋಟ: ಪ್ರತಿಯೊಬ್ಬರು ಪ್ರಕೃತಿಯನ್ನು ಆರಾಧಿಸುವ ಮನಸ್ಥಿತಿ ಸೃಷ್ಟಿಸಿಕೊಂಡರೆ ಪ್ರಕೃತಿ ತಾನಾಗಿಯೇ ಉಳಿದುಕೊಳ್ಳುತ್ತದೆ ಇದರೊಂದಿಗೆ ಮನುಕುಲಕ್ಕೆ ಆರೋಗ್ಯಕರ ವಾತಾವರಣ ಸಿಗಲು ಸಾಧ್ಯವಾಗುತ್ತದೆ ಎಂದು ಪರಿಸರಪ್ರೇಮಿ ರಕ್ತದಾನಿ ಕೆ.ರಾಘವ ನಾಯಕ್ ನುಡಿದರು.
ಭಾನುವಾರ ಮಣೂರು ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್ ಪ್ರೈಸಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಹಂದಟ್ಟು ಮಹಿಳಾ ಬಳಗ ಕೋಟ, ಸಮುದ್ಯತಾ ಗ್ರೂಪ್ಸ್ ಕೋಟ, ಸಿನಿಯರ್ ಜೆಸಿಐ ಕೋಟ ಇವರುಗಳ ಸಹಯೋಗದೊಂದಿಗೆ ಹಾಲು ಉತ್ಪಾದಕರ ಸಹಕಾರ ಸಂಘ ಮಣೂರು ಇವರ ಸಂಯೋಜನೆಯೊಂದಿಗೆ 215ನೇ ಪರಿಸರಸ್ನೇಹಿ ಭಾನುವಾರದ ಹಸಿರು ಜೀವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಸಿರಿದ್ದರೆ ಉಸಿರಿರಲು ಸಾಧ್ಯ ಎಂಬುವುದನ್ನು ಪ್ರತಿಯೊಬ್ಬರು ಮನಗಾಣಬೇಕು ಪಂಚವರ್ಣದ ಸಮಾಜಮುಖಿ ಕಾರ್ಯ ಭಗವಂತನ ಅತ್ಯಂತ ಪ್ರಿಯವಾದ ಕಾರ್ಯವಾಗಿದೆ ಇಂಥಹ ಪರಿಸರಪ್ರೇಮ ನಿತ್ಯನಿರಂತರವಾಗಿಸಿಕೊಂಡ ಪಂಚವರ್ಣ ಹಾಗೂ ಸಹಸಂಸ್ಥೆಗಳಿಗೆ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದರು.
ಶಿಕ್ಷಣ ತಜ್ಞ ಎಂ.ಎನ್ ಮಧ್ಯಸ್ಥ ಸ್ಥಳೀಯರಿಗೆ ಗಿಡ ನೀಡಿ ಪರಿಸರ ಜಾಗೃತಿ ಸಂದೇಶ ನೀಡಿದರು.
ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಗಿಡ ನೆಟ್ಟು ಪೋಷಿಸುವ ಕಾರ್ಯಗಳ ಬಗ್ಗೆ ಉಲ್ಲೇಖಿಸಿ ಶುಭ ಹಾರೈಸಿದರು.
ಇದಾದ ನಂತರ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಭಾಗಗಳಲ್ಲಿ ಗಿಡನೆಡಲಾಯಿತು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಹಾಲು ಉತ್ಪಾದಕರ ಸಹಕಾರ ಸಂಘ ಮಣೂರು ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹರ್ಷ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಮಣೂರು ಫ್ರೆಂಡ್ಸ್ ಪೂರ್ವಾಧ್ಯಕ್ಷ ದಿನೇಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸಿನಿಯರ್ ಜೆಸಿಐ ಕೋಟ ಅಧ್ಯಕ್ಷ ಕೇಶವ ಆಚಾರ್ ಕೋಟ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.