ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಜಿಲ್ಲೆಯ ರೈತ ಹಾಗೂ ಸಾಮಾಜಿಕ ಸಂಘಟನೆಗಳ ಬಹು ದಿನಗಳ ಬೇಡಿಕೆಯಾದ ಬ್ರಹ್ಮಾವರ ಕೃಷಿ ಸಂಶೋಧನ ಕೇಂದ್ರದಲ್ಲಿ 2024-25 ನೇ ಸಾಲಿನಿಂದ ಎರಡು ವರ್ಷಗಳ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ರಾಜ್ಯ ಸರ್ಕಾರ ಜು.15 ರಂದು ಆದೇಶ ಹೊರಡಿಸಿದೆ.
ರಾಜ್ಯ ಕೃಷಿ ಇಲಾಖೆಯ ಅಧೀನ ಕಾರ್ಯದರ್ಶಿ ಇಂದ್ರ ಎಂ ಅವರು ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ, ಇಲಾಖೆಯ 33 ನೇ ಸಮನ್ವಯ ಸಮಿತಿ ಹಾಗೂ 7ನೇ ಪರಿಣಿತ ಸಮಿತಿ ಸಭೆಯ ತೀರ್ಮಾನದಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಡಿಯಲ್ಲಿ ಬ್ರಹ್ಮಾವರದ ಕೃಷಿ ಸಂಶೋಧನ ಕೇಂದ್ರದಲ್ಲಿ ಲಭ್ಯವಿರುವ ಕಟ್ಟಡ, ಮೂಲ ಸೌಕರ್ಯ ಹಾಗೂ ಬೋಧನಾ ಸಿಬ್ಬಂದಿಗಳನ್ನು ಬಳಸಿಕೊಂಡು, ಸರ್ಕಾರಕ್ಕೆ ಹೆಚ್ಚುವರಿ ಅನುದಾನಕ್ಕೆ ಪ್ರಾಸ್ತಾಪನೆ ಸಲ್ಲಿಸದಂತೆ ಷರತ್ತು ವಿಧಿಸಿ, 2024-25 ನೇ ಸಾಲಿನಿಂದಲೇ ಎರಡು ವರ್ಷಗಳ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬ್ರಹ್ಮಾವರದ ಕೃಷಿ ಕೇಂದ್ರದಲ್ಲಿ ಕೃಷಿ ಅಥವಾ ತೋಟಗಾರಿಕಾ ಪದವಿ ಕಾಲೇಜು ಹಾಗೂ ಡಿಪ್ಲೋಮಾ ಕೋರ್ಸ್ ಆರಂಭಸುವಂತೆ ಜಿಲ್ಲೆಯಾದ್ಯಂತ ಆಗ್ರಹಪೂರ್ವಕ ಬೇಡಿಕೆ ಬಂದ ಹಿನ್ನೆಲೆಯಲ್ಲಿ, ಬ್ರಹ್ಮಾವರ ಸಮೀಪದ ಚೇರ್ಕಾಡಿಯಲ್ಲಿ ನಡೆದಿದ್ದ ಕೃಷಿ ಮೇಳಕ್ಕೆ ರಾಜ್ಯ ಕೃಷಿ ಸಚಿವರಾದ ಚಲುವರಾಯ ಸ್ವಾಮಿ ಅವರನ್ನು ಆಮಂತ್ರಿಸಲಾಗಿತ್ತು. ಈ ಸಂದರ್ಭದಲ್ಲಿ ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೇಡಿಕೆಯ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಅಂದೇ ಮನವಿಗೆ ಸ್ವಂದಿಸಿದ್ದ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದರು.
ಇದೀಗ ಜಿಲ್ಲೆಯ ಜನತೆಯ ಬೇಡಿಕೆಗೆ ಸ್ಪಂದಿಸಿ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಸೂಚನೆ ಮೇರೆಗೆ ಕೃಷಿ ಸಚಿವ ಚಲುವರಾಯ ಸ್ವಾಮಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.