ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಪ್ರತೀ ವರ್ಷ ಕರ್ಕಾಟಕ ಅಮಾವಾಸ್ಯೆಯಂದು ಆಚರಿಸುವ ಸಂಪ್ರದಾಯ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ವಿಶಿಷ್ಠವಾಗಿ ಆಯೋಜಿಸಲು ಉದ್ದೇಶಿಸಲಾಗಿದೆ. ಭಾಷೆಯ ಹೆಸರಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲು ನಿರ್ಧರಿಸಿದ್ದು ಜುಲೈ 28ರಂದು ಕುಂದಾಪುರದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಗ್ರಾಮೀಣ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಹೇಳಿದರು.
ಅವರು ಕಲಾಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಜಾತಿ ಮತ್ತು ಧರ್ಮದ ಹೆಸರಲ್ಲಿ ಕ್ರೀಡೆಗಳ ಆಯೋಜನೆ ಆಗುತ್ತಿದೆ. ಆದರೆ ಭಾಷೆಯ ಹೆಸರಿನಲ್ಲಿ ಒಂದು ಕ್ರೀಡಾ ಕೂಟ ಆಗುವುದು ಕುಂದಾಪುರದಲ್ಲಿ ಪ್ರಥಮ ಎಂದು ಭಾವಿಸಲಾಗಿದೆ. ಈ ಗ್ರಾಮೀಣ ಕ್ರೀಡಾಕೂಟ ಕಲಾಕ್ಷೇತ್ರದ ನೇತೃತ್ವದಲ್ಲಿ ನಡೆದರೂ ಇದಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಭಾಗಿತ್ವ, ತಾಲೂಕು ಆಡಳಿತದಿಂದ ಸಹಕಾರವನ್ನು ಅಪೇಕ್ಷಿಸಿದ್ದೇವೆ. ಉಡುಪಿ ಜಿಲ್ಲೆಯ ಐದು ಮಂದಿ ಶಾಸಕರುಗಳು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ವಿನಂತಿ ಮಾಡಿದ್ದೇವೆ ಎಂದರು.
ಆಧುನಿಕತೆಯ ಹೆಸರಲ್ಲಿ ನಮ್ಮ ಕ್ರೀಡೆಗಳು ನೇಪಥ್ಯಕ್ಕೆ ಸರಿದು ಹೋಗುತ್ತಾ ಇವೆ. ಮುಂದಿನ ಜನಾಂಗ ನಮ್ಮ ಭಾಷೆ ಸಂಸ್ಕøತಿಯನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವಂತಹ ಸದುದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲೂಕಿನ ಜನರು ಭಾಗವಹಿಸಲಿದ್ದು ಗುಂಪು ಆಟಗಳನ್ನು ತಾಲೂಕುವಾರು ನಡೆಸಲಾಗುವುದು. ಅತೀ ಹೆಚ್ಚು ಆಟಗಳನ್ನು ಗೆದ್ದ ತಾಲೂಕಿನ ತಂಡವನ್ನು ಸಮಗ್ರ ಚಾಂಪಿಯನ್ ಎಂದು ಘೋಷಿಸಿ ವಿಶೇಷವಾಗಿ ಪುರಸ್ಕರಿಸಲಾಗುವುದು.
ಸುದ್ಧಿಗೋಷ್ಠಿಯಲ್ಲಿ ಕಲಾಕ್ಷೇತ್ರದ ಉಪಾಧ್ಯಕ್ಷ ಕೆ.ಆರ್ ನಾಯ್ಕ್, ಕಾರ್ಯದರ್ಶಿ ತ್ರಿವಿಕ್ರಮ್ ಪೈ, ಗೀತಗಾಯನ ಸಂಸ್ಥೆಯ ಸನತ್ ಕುಮಾರ್ ರೈ, ರಾಜೇಶ ಕಾವೇರಿ, ಸಾಯಿನಾಥ್ ಶೇಟ್, ಅರುಣ್ ಬಾಣ, ರವೀಂದ್ರ ಬಂಗೇರ, ಹೇಮಾ ಉಪಸ್ಥಿತರಿದ್ದರು.
ಸ್ಪರ್ಧೆಗಳು ಯಾವುವು?
ವೈಯಕ್ತಿಕ ವಿಭಾಗ-12 ವರ್ಷ ಕೆಳಗಿನವರಿಗೆ ಗುರಿ ಇಟ್ಟು ಹೊಡೆಯುವುದು, ಗೋಣಿ ಚೀಲ ಓಟ, ಚಕ್ರವ್ಯೂಹ, ಟಯರ್ ಓಟ, ಬಾಂಬ್ ಇನ್ ದ ಸಿಟಿ, 17 ವರ್ಷ ಮತ್ತು ಅದಕ್ಕಿಂತ ಕೆಳಗಿನವರಿಗೆ ಉಪ್ಪು ಮೂಟೆ, ಗೋಣಿ ಚೀಲ ಓಟ, ಗೂಟ ಸುತ್ತಿ ಓಟ, ಟಯರ್ ಓಟ, ಕಂಬಳ, ಮುಕ್ತ ವಿಭಾಗ-ಪುರುಷ ಮಹಿಳೆಯರಿಗೆ ಗೋಣಿ ಚೀಲ ಓಟ, ಕಂಬಳ, ಟಯರ್ ಓಟ, ಉಪ್ಪು ಮುಡಿ, ಗೂಟ ಸುತ್ತಿ ಓಟ, ಗುಂಪು ಆಟಗಳು-ಪುರುಷರಿಗೆ ಹಗ್ಗ ಜಗ್ಗಾಟ, ಲಗೋರಿ, ಚಂಡಾನ್ ಚಂಡ್, ಮಹಿಳೆಯರಿಗೆ ಡೋರ್ಜ್ ಬಾಲ್, ಹಗ್ಗ ಜಗ್ಗಾಟ, ಡೊಂಕಾಲು, ಪ್ರದರ್ಶನ ಆಟಗಳು ಚೆನ್ನೆಮಣೆ, ಗುಡ್ನ, ಗೋಲಿ ಇತ್ಯಾದಿ.