ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇ ಜೊತೆ ವಿಲೀನಗೊಳಿಸುವುದನ್ನೂ ಸೇರಿಸಿ ಹಲವು ಬೇಡಿಕಗಳೊಂದಿಗೆ ಕುಂದಾಪುರ ರೈಲು ಹಿತರಕ್ಷಣಾ ಸಮಿತಿಯು ರೈಲ್ವೇ ರಾಜ್ಯ ಸಚಿವ ಸೋಮಣ್ಣನವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಂಗಳೂರಿನ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೂಲಕ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಮಿತಿ, ಕುಂದಾಪುರ ಬೆಂಗಳೂರು ನಡುವೆ ಹೊಸ ಪಡೀಲ್ ಬೈಪಾಸ್ ರೈಲು ಆರಂಭಿಸಬೇಕು, ಉಡುಪಿ ನಿಲ್ದಾಣಕ್ಕೆ ಅಮೃತ ಭಾರತ ಯೋಜನೆಯನ್ನು ಆರಂಭಿಸಬೇಕು, ಬಾರ್ಕೂರು ರೈಲು ನಿಲ್ದಾಣಕ್ಕೆ ಎರಡನೇ ಪ್ಲಾಟ್ ಪಾರಂ ನಿರ್ಮಿಸಬೇಕು, ಭದ್ರತೆಯ ದೃಷ್ಟಿಯಿಂದ ಉಡುಪಿ ಜಿಲ್ಲಾ ನಿಲ್ದಾಣಗಳಿಗೆ RPF ಪಡೆಗಳ ಹೆಚ್ಚುವರಿ ನೇಮಕಾತಿ ಮಾಡಬೇಕು. ಮತ್ಸ್ಯಗಂಧ ಮತ್ತು CST ಸೂಪರ್ ಪಾಸ್ಟ್ ರೈಲುಗಳಿಗೆ LHB ಕೋಚ್ ಅಳವಡಿಸಬೇಕು, ಸುಬ್ರಹ್ಮಣ್ಯ – ಸಕಲೇಶಪುರ ಘಾಟಿಯಲ್ಲಿ ಹೆಚ್ಚುವರಿ ರೈಲು ಸಂಚಾರಕ್ಜೆ ಎದುರಾಗುತ್ತಿರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು, ಸಮಯ ಬದಲಾವಣೆ ಮಾಡದೇ ಪಂಚಗಂಗಾ ರೈಲಿಗೆ ಹೆಚ್ಚು ಕೋಚ್ ಅಳವಡಿಕೆ ಸೇರಿದಂತೆ ಹಲವು ವಿಷಯಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.
ಮಾಹಿತಿ ಪಡೆದ ಸಚಿವ ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಿತಿಯ ಸದಸ್ಯರಾದ ಗಣೇಶ್ ಪುತ್ರನ್, ವಿವೇಕ್ ನಾಯಕ್, ಜಾಯ್ ಕರ್ವಾಲೋ, ನಾಗರಾಜ್ ಆಚಾರ್, ಪ್ರವೀಣ್ ಟಿ, ಅಭಿಜಿತ್ ಸಾರಂಗ್, ಪೃಥ್ವಿ ಕುಂದರ್, ಗೌತಮ್ ಶೆಟ್ಟಿ, ಸುಧಾಕರ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.