ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಕ್ಸಲ್ ಪೀಡಿತ ಪ್ರದೇಶವಾದ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಜಾ – ಕಾರಿಮನೆ – ಎಡ್ಮಲೆ ರಸ್ತೆಯ ಕಾಯಕಲ್ಪಕ್ಕೆ ಉಡುಪಿ ಜಿಲ್ಲಾಡಳಿತ ಮುಂದಾಗಿದೆ. ಇಲ್ಲಿನ ಸಂಪರ್ಕ ರಸ್ತೆ ಸಮಸ್ಯೆ ಬಗ್ಗೆ ಕುಂದಾಪುರ ಮಿರರ್ ಜುಲೈ 21ರಂದು ಸಚಿತ್ರ ವರದಿ ಪ್ರಸಾರ ಮಾಡಿತ್ತು.
ಕರ್ನಾಟಕದ ಚಿರಾಪುಂಜಿ ಎಂದೇ ಪ್ರಸಿದ್ಧವಾದ ಆಗುಂಬೆಯ ತಪ್ಪಲಿನ ಗ್ರಾಮವಾದ ಮಡಾಮಕ್ಕಿ, ಕಾಡುಗಳಿಂದ ಕೂಡಿದ ಪ್ರದೇಶ. ಕಳೆದ ಹತ್ತು ದಿನಗಳಿಂದ ವಿಪರೀತ ಬಿದ್ದ ಮಳೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ರಸ್ತೆಯಾದ ಹಂಜಾ – ಕಾರಿಮನೆ – ಎಡ್ಮಲೆ ಸಂಪರ್ಕಿಸುವ ಸುಮಾರು 2.50 ಕಿ.ಮೀ. ಕಚ್ಚಾ ರಸ್ತೆಯು ಸಂಪೂರ್ಣ ಶಥಿಲಗೊಂಡಿತ್ತು. ಈ ಭಾಗದಲ್ಲಿ ಸುಮಾರು 150 ಕುಟುಂಬಗಳಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಶಾಲೆಗೆ ಹೋಗಲು, ಕೆಲಸಕ್ಕೆ ಹೋಗಲು ಪರದಾಡುವಂತಾಗಿತ್ತು.
ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ವರದಿ ಗಮನಿಸಿದ ಸ್ಥಳೀಯ ನಾಯಕರು ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರಿಗೆ ಮಾಹಿತಿ ನೀಡಿದ್ದರು. ಭಂಡಾರಿಯವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಮನಕ್ಕೆ ತಂದು ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದಾರೆ. ಅದರಂತೆ ಗುರುವಾರ ಜಲ್ಲಿ ಹಾಕುವ ಕೆಲಸ ಪ್ರಾರಂಭಗೊಂಡಿದೆ. ಇದರಿಮದಾಗಿ ಈ ರಸ್ತೆ ಬಳಸುವ ಸುಮಾರು 150 ಕುಟುಂಬಗಳು ನಿರಾಳವಾಗಿದ್ದಾರೆ.