ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಸಂಸದ ಬಿ. ವೈ.ರಾಘವೇಂದ್ರ ಅವರು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಹಾಗೂ ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣ ಅಭಿವೃದ್ದಿಗೆ ಮನವಿ ಮಾಡಿದರು.
ಆದಿ ಶಂಕರಾಚಾರ್ಯರು ಸ್ಥಾಪಿಸಿದ ಶ್ರೀ ಮೂಕಾಂಬಿಕಾ ದೇವಿಗೆ ಸಮರ್ಪಿತವಾದ ಕೊಲ್ಲೂರು ಮೂಕಾಂಬಿಕಾ ದೇವಾಲಯವು ಪ್ರಾಚೀನ ಕಾಲದ ಶ್ರೀಮಂತ ಪರಂಪರೆಯೊಂದಿಗೆ ಪೂಜ್ಯ ಯಾತ್ರಾ ಸ್ಥಳವಾಗಿದೆ. ಈ ದೇವಾಲಯವು ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ನಮ್ಮ ದೇಶದ ಹಾಗೂ ಹೊರ ದೇಶದ ಮಾಜಿ ರಾಷ್ಟ್ರಪತಿ, ಪ್ರಧಾನಿ ಮುಂತಾದ ವಿವಿಧ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ವ್ಯಕ್ತಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸಾಂಸ್ಕೃತಿಕ ಶ್ರೀಮಂತಿಕೆಯ ಹೊರತಾಗಿಯೂ, ಕೊಲ್ಲೂರು ತನ್ನ ಸಂಭಾವ್ಯ ಯಾತ್ರಾರ್ಥಿಗಳಿಗೆ ಸಾಕಾಗುವಷ್ಟು ಮೂಲಸೌಕರ್ಯವನ್ನು ಹೊಂದಿಲ್ಲ.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಇತಿಹಾಸ, ಧಾರ್ಮಿಕ ಹಾಗೂ ಸಾಂಕೃತಿಕ ಪರಂಪರೆ ಉಳಿಸಿಕೊಂಡು ಸಮಗ್ರ ಅಭಿವೃದ್ದಿಯಿಂದ ಯಾತ್ರಿಕರು ಮತ್ತು ಭಕ್ತಾಧಿಗಳಿಗೆ ಸುಧಾರಿತ ಸೌಲಭ್ಯಗಳು ಮತ್ತು ಸೇವೆಗಳನ್ನು ನೀಡಲು ಯೋಜನೆ ರೂಪಿಸಲು ಹಾಗೂ ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣವನ್ನು ಭಕ್ತಾಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ರೂ 14.75 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲು ಸಚಿವರಲ್ಲಿ ಮನವಿ ಮಾಡಲಾಗಿದೆ.
ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣ ಹಾಗೂ ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣ ಅಭಿವೃದ್ದಿ ಬಗ್ಗೆ ಮಾನ್ಯ ಕೇಂದ್ರ ಪ್ರವಾಸೋದ್ಯಮ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ.