ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತೋಟ ನೋಡಿಕೊಳ್ಳಲೆಂದು ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಗಂಡ ಹೆಂಡಿರ ಕುಟುಂಬದಲ್ಲಿ ಕಲಹ ನಡೆದು ಪತಿ ಪತ್ನಿಯ ಕುತ್ತಿಗೆಗೆ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಸಂಭ್ರಮಿಸಿದ ಹೇಯ ಘಟನೆ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರೂರಿನಲ್ಲಿ ನಡೆದಿದೆ. ಸಾಗರದ ಸೊರಬ ತಾಲೂಕಿನ ಅನಿತಾ (38) ಎಂಬಾಕೆಯೇ ಮಾರಣಾಂತಿಕ ಹಲ್ಲೆಗೊಳಗಾದವಳು. ಆಕೆಯ ಪತಿ ಲಕ್ಷ್ಮಣ (40) ಆರೋಪಿ.
ಇಲ್ಲಿನ ಬಸ್ರೂರು ಕಾಶಿ ಮಠಕ್ಕೆ ಸಂಬಂಧಿಸಿದ ರೆಸಿಡೆನ್ಷಿಯಲ್ ಬ್ಲಾಕ್ ನ ಬಾಡಿಗೆ ಮನೆಯ ಒಂದನೇ ಮನೆಯಲ್ಲಿ ಬಾಡಿಗೆಗೆ ಸೊರಬ ತಾಲೂಕಿನ ಮೂಲದ ಲಕ್ಷ್ಮಣ ಹಾಗೂ ಅನಿತಾ ದಂಪತಿಗಳು ವಾಸಿಸುತ್ತಿದ್ದರು. ಕಾಶೀ ಮಠದ ತೋಟ ನೋಡಿಕೊಳ್ಳಲೆಂದು ಅವರು ತಮ್ಮ ಪುಟ್ಟ ಮಗುವನ್ನು ಸೊರಬದಲ್ಲಿಯೇ ಬಿಟ್ಟು 4 ತಿಂಗಳ ಹಿಂದೆ ಬಂದಿದ್ದರು.
ಶನಿವಾರ ರಾತ್ರಿ ಸುಮಾರು 6.45ರ ಸುಮಾರಿಗೆ ಗಂಡ ಹೆಂಡತಿ ಗಲಾಟೆ ನಡೆದು ಕುಡಿದ ಮತ್ತಿನಲ್ಲಿದ್ದ ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆಗೆ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪತ್ನಿ ಅನಿತಾ ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಇತ್ತ ಪತಿ ಲಕ್ಷ್ಮಣ ಮನೆಯ ಬಾಗಿಲು ಚಿಲಕ ಹಾಕಿಕೊಂಡು ಹಾಲಿನಲ್ಲಿ ಕತ್ತಿ ಹಿಡಿದು ಕುಣಿಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ಸುಮಾರು ಒಂದೂವರೆ ಗಂಟೆ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿ ವಿಫಲವಾದ ಬಳಿಕ ಒಂದಷ್ಟು ಜನ ಆರೋಪಿಯ ಏಕಾಗ್ರತೆಯನ್ನು ತನ್ನತ್ತ ಸೆಳೆದು ಹಿಂದುಗಡೆ ಇದ್ದ ಮನೆಯ ಕಿಟಕಿ ಒಡೆದು ಅಡುಗೆ ಕೋಣೆಗೆ ನುಗ್ಗಿ ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಹೊರತಂದು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ಆರೋಪಿ ಮಾತ್ರ ದೆವ್ವ ಮೈಮೇಲೆ ಬಂದವನಂತೆ ಕತ್ತಿ ಹಿಡಿದು ಕುಣಿಯುತ್ತಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿದರೂ ಕತ್ತಿ ಬೀಸುತ್ತಲೇ ಇದ್ದ ಆರೋಪಿ ಮಾತ್ರ ಹೊರಬರಲಿಲ್ಲ. ಸುಮಾರು 10 ಗಂಟೆಯ ಬಳಿಕ ರಿಕ್ಷಾ ಚಾಲಕ ಕೆರೆಕಟ್ಟೆ ಅಶೋಕ್, ಸಚಿನ್ ಹಾಗು ಇತರರು ಹಿಂದಿನಿಂದ ಹೋಗಿ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಜೀವದ ಹಂಗು ತೊರೆದು ರಕ್ಷಿಸಿದ ಸ್ಥಳೀಯರ ಸಾಹಸಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.