ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿ ಜೈ ಹಿಂದ್ ಹೊಟೇಲಿನ ಎದುರುಗಡೆ ಇರುವ ನಾಗರಾಜ ಎಂಬವರಿಗೆ ಸೇರಿದ ಬಾಡಿಗೆ ಕಟ್ಟಡದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದ ಸಂತೋಷ್ ಆಚಾರ್ಯ ಎಂಬವರು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿದ್ದು ಅವಿವಾಹಿತರಾಗಿದ್ದರು
ಸಂತೋಷ ಆಚಾರ್ಯ ಕಳೆದ 25 ವರ್ಷಗಳಿಂದ ಕುಂದಾಪುರ ನಗರದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಬ್ರಹ್ಮಾವರ ಬಳಿಯ ಉಪ್ಪೂರಿನಲ್ಲಿರುವ ತನ್ನ ಮನಗೆ ಹೋಗಿ ಬರುತ್ತಿದ್ದರು.
ಇಂದು ನಾಗರ ಪಂಚಮಿಯ ಪ್ರಯುಕ್ತ ಅಣ್ಣ ಮನೆಗೆ ಬರಲಿಲ್ಲವೆಂದು ಸಹೋದರ ಸುರೇಶ್ ಆಚಾರ್ಯರವರು ಫೋನ್ ಮಾಡಿದ್ದು ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಅವರು ಅಣ್ಣನ ಮನೆಗೆ ಸ್ನೇಹಿತರೊಬ್ಬರನ್ನು ಕಳುಹಿಸಿ ವಿಚಾರಿಸಿದಾಗ ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿದೆ ಎಂದು ತಿಳಿಸಿದ್ದು ಸಂತೋಷ್ ಆಚಾರ್ಯ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಸಂತೋಷ್ ಚಾಪೆಯ ಮೇಲೆ ಮಲಗಿದ್ದ ಸ್ಥಿತಿಯಲ್ಲಿದ್ದರು. ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಫ್ಯಾನ್ ತಿರುಗುತ್ತಿತ್ತು. ಮೊಬೈಲ್ ಇಯರ್ ಫೋನ್ ಕಿವಿಗೆ ಸಿಕ್ಕಿಸಿದ್ದು ಹಾಗೆಯೇ ಇತ್ತು. ಶವವನ್ನು ಸರಕಾರಿ ಆಸ್ಪತ್ರೆಯ ಶವಾಗರಕ್ಕೆ ಸಾಗಿಸಲಾಗಿದ್ದು ಬಳಿಕ ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಸಂತೋಷ್ ಅಚಾರ್ಯ ತನ್ನ ಸ್ನೇಹಿತನಿಗೆ ಗುಡ್ ಮಾರ್ನಿಂಗ್ ಸಂದೇಶ ಕಳುಹಿಸಿದ್ದರೆನ್ನಲಾಗಿದ್ದು, ಮಂಗಳವಾರ ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತವಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ಅಗಲಿದ್ದಾರೆ.