ಕುಂದಾಪುರ ಮಿರರ್ ಸುದ್ದಿ…
ಉಡುಪಿ: ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಕೋವಿಡ್ ನಿರೋಧಕ ಲಸಿಕೆಯೇ ಮದ್ದು, ಇದನ್ನು ಪ್ರತಿಯೊಬ್ಬರಿಗೂ ಮನೆ ಮನೆಗೆ ಭೇಟಿ ನೀಡಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಲಸಿಕಾ ಕಾರ್ಯಪಡೆಯ ಸಮನ್ವಯ ಸಮಿತಿಯ ಅಧ್ಯಕ್ಷರಾದ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮನೆ ಮನೆ ಭೇಟಿ ಕೋವಿಡ್ ಲಸಿಕಾ ಅಭಿಯಾನ ಅನುಷ್ಠಾನ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2,95,375 ಮನೆಗಳಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ, ಕೋವಿಡ್ ನಿರೋಧಕ ಲಸಿಕೆ ಪಡೆಯದೇ ಇರುವವರ ವಿವರವನ್ನು ಪಡೆಯುವುದರ ಜೊತೆಗೆ ಅವರುಗಳು ಲಸಿಕೆ ಪಡೆಯುವಂತೆ ಅರಿವು ಮೂಡಿಸಿ, ಲಸಿಕೆ ನೀಡಬೇಕು ಎಂದರು.
ಲಸಿಕಾ ಕಾರ್ಯಕ್ರಮವು ನವೆಂಬರ್ 16 ರಿಂದ ನವೆಂಬರ್ 30 ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿದ್ದು, ಸಾರ್ವಜನಿಕರು ಹಾಗೂ ಸಮುದಾಯ ಮುಖಂಡರು ಮನೆ ಮನೆ ಭೇಟಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಹಕರಿಸಬೇಕು ಎಂದರು.
ಈ ಅಭಿಯಾನ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಯವರು ಸಹ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವುದರೊಂದಿಗೆ, ಅಲೆಮಾರಿಗಳು ಹಾಗೂ ವಲಸಿಗರಿಗೆ ತಪ್ಪದೇ ಲಸಿಕೆಯನ್ನು ನೀಡಬೇಕು ಎಂದರು.
ಮನೆ ಮನೆ ಭೇಟಿ ಸಮಯದಲ್ಲಿ ಸರ್ಕಾರ ನೀಡಿರುವ ನಿಗದಿತ ನಮೂನೆಗಳಲ್ಲಿ ಅವರ ಮಾಹಿತಿಯನ್ನು ಪಡೆಯುವುದರ ಜೊತೆಗೆ ಅವರ ಮೊಬೈಲ್ ಸಂಖ್ಯೆಯನ್ನು ಪಡೆಯಬೇಕು ಎಂದರು.
ಪ್ರತಿ ದಿನ ಕನಿಷ್ಠ 7 ಗ್ರಾಮ ಪಂಚಾಯತಿಗಳನ್ನು ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಈ ಸರ್ವೇ ಕಾರ್ಯವನ್ನು 2 ಬಾರಿ ಸಂಪರ್ಕಿಸಬೇಕು. ಇವುಗಳ ಉಸ್ತುವಾರಿಯನ್ನು ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದರು.
ಪ್ರತಿ ಮನೆಯಲ್ಲಿನ 18 ವರ್ಷ ಮೇಲ್ಪಟ್ಟವರು ಮಾಹಿತಿಯನ್ನು ಮತದಾರರ ಪಟ್ಟಿಯಿಂದ ಪಡೆದುಕೊಳ್ಳುವುದು ಸೂಕ್ತ ಎಂದ ಅವರು, ಈ ಅಭಿಯಾನಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು, ಎನ್.ಜಿ.ಓ ಹಾಗೂ ಯುವಕ ಮಂಡಳಿಯ ಸಹಕಾರ ಪಡೆಯಬೇಕು ಎಂದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಗರ್ಭಿಣಿಯರು, ಬಾಣಂತಿಯರು ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿರುವ ಕೆಲವರು ಆಲಸ್ಯದಿಂದ ಲಸಿಕೆಯನ್ನು ತಿರಸ್ಕರಿಸಿರುವುದು ಕಂಡುಬರುತ್ತಿದೆ. ಇವರುಗಳ ಮನವೊಲಿಸಿ ಲಸಿಕೆ ನೀಡುವ ಕಾರ್ಯವನ್ನು ಮನೆ ಮನೆ ಭೇಟಿ ಅಭಿಯಾನದ ಮೂಲಕ ಮಾಡಬೇಕು ಎಂದರು.
ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಮೂಲಕ ತಮ್ಮ ಪೋಷಕ ಹಾಗೂ ಕುಟುಂಬ ವರ್ಗದವರು ಲಸಿಕೆ ಪಡೆಯುವಂತೆ ಪತ್ರ ಅಭಿಯಾನದ ಮೂಲಕ ಉತ್ತೇಜಿಸಬೇಕು ಎಂದ ಅವರು ತಾಲೂಕಿನಲ್ಲಿ ಯಾವ ಶಾಲೆಯ ಕುಟುಂಬದವರು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದರೆ ಆ ಶಾಲೆಗೆ ಬಹುಮಾನ ನೀಡಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ, ಲಸಿಕಾ ಅಭಿಯಾನದ ನೊಡೆಲ್ ಅಧಿಕಾರಿ ಡಾ.ರಾಮ, ಜಿಲ್ಲೆಯ ವಿವಿಧ ತಾಲೂಕುಗಳ ವೈದ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.